ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ನಗರದ ಆರ್.ಟಿ.ನಗರದ ದಟ್ಟಗಳ್ಳಿ ಸಮೀಪವಿರುವ ಪ್ರಸಿದ್ಧ ‘ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್’ ಪಬ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಪಬ್‌ನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಪಾರ್ಟಿಗೆ ಬಂದಿದ್ದ ಹಲವು ಗ್ರಾಹಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಅಗ್ನಿ ದುರಂತದಲ್ಲಿ ಡಾರ್ಜಲಿಂಗ್ ಮೂಲದ ಸಾಹಿನ್ (26) ಮತ್ತು ನೇಪಾಳ ಮೂಲದ ಪ್ರಕಾಶ್ (24) ಎಂಬ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಪಾರ್ಟಿಯಲ್ಲಿದ್ದ ಹಲವರಿಗೆ ಗಾಯವಾಗಿದೆ ಎಂಬುದ್ದಾಗಿ ತಿಳಿದುಬಂದಿದೆ.

ಹಾಗೂ ಪಬ್‌ನ ಅಡುಗೆ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಸ್ಫೋಟದ ಭೀಕರತೆಗೆ ಪಬ್‌ನ ಒಳಗಡೆ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಇಡೀ ಕಟ್ಟಡವನ್ನು ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿತ್ತು. ಏಕಾಏಕಿ ಸಂಭವಿಸಿದ ಈ ಘಟನೆಯಿಂದ ಪಬ್‌ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ದಿಕ್ಕುತೋಚದೆ ಕಂಗಾಲಾಗಿದ್ದಾರೆ. ಕಟ್ಟಡದ ಒಳಗೆ ಹೊಗೆ ತುಂಬಿಕೊಂಡು ಉಸಿರಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದಾಗ, ಒಳಗಿದ್ದ ಕೆಲವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪಬ್‌ನ ಮೇಲಂತಸ್ತಿನಿಂದ ಕೆಳಗೆ ಜಿಗಿದು ಪಾರಾಗಲು ಯತ್ನಿಸಿದ್ದಾರೆ.

ಆದರೆ ಈ ವೇಳೆ ಕೆಲವರಿಗೆ ಮೂಳೆ ಮುರಿತ ಹಾಗೂ ಗಂಭೀರ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಲವಾರು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಇಡೀ ಕಟ್ಟಡವನ್ನು ಆವರಿಸಿದ್ದ ಭಾರಿ ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದ್ದು, ಕಟ್ಟಡದ ಒಳಗಿದ್ದವರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.
















