ಶಿವಮೊಗ್ಗ: ಶಾಲಾ ಅವರಣದಲ್ಲಿಯೇ ದಿಢೀರ್ ಕುಸಿದು ಬಿದ್ದು ಒಂದನೇ ತರಗತಿಯ ವಿದ್ಯಾರ್ಥಿ ಮೃತಪಟ್ಟ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಸರ್ಕಾರಿ ಶಾಲೆಯಲ್ಲಿ ಜೂನ್ 13ರಂದು ನಡೆದಿದ್ದು ತ್ರಿಲೋಕ್ ಜೈನ್ (6) ಎಂಬಾತನೇ ಸಾವನ್ನಪ್ಪಿದ ಬಾಲಕ. ತ್ರಿಲೋಕ್ ಸಂಜೆ ಶಾಲೆ ಮುಗಿದ ನಂತರ ಮನೆಗೆ ಹೋಗಲು ಮೈದಾನದಲ್ಲಿ ನಿಂತಿದ್ದ. ಈ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದ. ತಕ್ಷಣ ಆತನಿಗೆ ಶಾಲಾ ಶಿಕ್ಷಕರು ಉಪಚರಿಸಿದ್ದರು. ಬಳಿಕ ಸ್ಥಳೀಯ ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಹಾಗೂ ಅಲ್ಲಿ ವೈದ್ಯರು ಇಲ್ಲದ ಕಾರಣ ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ದಾರಿ ಮಧ್ಯ ಬಾಲಕ ಕೊನೆಯುಸಿರೆಳೆದಿದ್ದಾನೆ. ತ್ರಿಲೋಕ್ ಹಾಳಸಸಿ ಗ್ರಾಮದ ಪಕ್ಕದ ಕೊಡನವಳ್ಳಿ ನಿವಾಸಿಗಳಾದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿಯ ಪುತ್ರನಾಗಿದ್ದ. ಈತ ಇದೇ ಜೂನ್ 1ರಂದು ಶಾಲೆಗೆ ದಾಖಲಾಗಿದ್ದ. ತಾಯಿ ಶಿಲ್ಪಾ ಅವರು ಹಾಳಸಸಿಯ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪುಟ್ಟ ಬಾಲಕನ ದಿಢೀರ್ ಸಾವಿನಿಂದ ಪೋಷಕರಷ್ಟೇ ಅಲ್ಲದೆ, ಇಡೀ ಗ್ರಾಮವೇ ದುಃಖದಲ್ಲಿ ಮುಳುಗಿದೆ. ಶಾಲಾ ಶಿಕ್ಷಕರು ಹಾಗೂ ಇತರೆ ಮಕ್ಕಳು ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.
















