ಮನೆ ಸುದ್ದಿ ಜಾಲ 33ನೇ ದೇಶದಿಂದ ಶ್ರೇಷ್ಠ ಪುರಸ್ಕಾರ : ಮೋದಿಗೆ ಸ್ಲೋವಾಕಿಯಾದ ಅತ್ಯುನ್ನತ ಪ್ರಶಸ್ತಿ ಪ್ರದಾನ

33ನೇ ದೇಶದಿಂದ ಶ್ರೇಷ್ಠ ಪುರಸ್ಕಾರ : ಮೋದಿಗೆ ಸ್ಲೋವಾಕಿಯಾದ ಅತ್ಯುನ್ನತ ಪ್ರಶಸ್ತಿ ಪ್ರದಾನ

0

ಬ್ರಾಟಿಸ್ಲಾವಾ(ಸ್ಲೋವಾಕಿಯಾ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಲೋವಾಕಿಯಾ ತನ್ನ ಅತ್ಯುನ್ನತ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಬ್ರಾಟಿಸ್ಲಾವಾದಲ್ಲಿ ನಡೆದ ಸಮಾರಂಭದಲ್ಲಿ ಸ್ಲೋವಾಕಿಯಾ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಅವರು ಪ್ರಧಾನಿ ಮೋದಿಗೆ ಪ್ರತಿಷ್ಟಿತ ಪ್ರಶಸ್ತಿ ಪ್ರದಾನ ಮಾಡಿದರು. ತಮ್ಮ ದೇಶದೊಂದಿಗಿನ ಸ್ನೇಹ ಸಂಬಂಧಗಳು ಮತ್ತು ಅದರ ಅಂತಾರಾಷ್ಟ್ರೀಯ ಸ್ಥಾನಮಾನಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಳನ್ನು ಗುರುತಿಸಿ ವಿದೇಶಿ ಗಣ್ಯರಿಗೆ ಸ್ಲೋವಾಕಿಯಾ ಈ ವಿಶೇಷ ಗೌರವ ನೀಡುತ್ತದೆ ಎನ್ನಲಾಗಿದೆ.

ಈ ಕುರಿತ್ತಾಗಿ ‘ಈ ಪ್ರಶಸ್ತಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಯುರೋಪ್ ಜತೆಗಿನ ಭಾರತದ ಸಂಬಂಧವನ್ನು ಮುನ್ನಡೆಸುವಲ್ಲಿ ಮೋದಿ ಅವರ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಇದು ಪ್ರಧಾನಿ ಮೋದಿ ಅವರಿಗೆ 33ನೇ ರಾಷ್ಟ್ರ ನೀಡಿದ ಅತ್ಯುನ್ನತ ಪ್ರಶಸ್ತಿ ಎಂಬುದು ಗಮನಾರ್ಹ. ಪ್ರಶಸ್ತಿ ಸ್ವೀಕರಿಸಿದ ಮೋದಿ, ಸ್ಲೋವಾಕಿಯಾದ ನಾಗರಿಕರು ಮತ್ತು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ‘ಭಾರತದ 140 ಕೋಟಿ ಜನರಿಗೆ ಸೇರಿರುವ ಈ ಗೌರವಕ್ಕಾಗಿ ಸ್ಲೋವಾಕಿಯಾದ ಜನರು ಮತ್ತು ಸರ್ಕಾರಕ್ಕೆ ನನ್ನ ಕೃತಜ್ಞತೆಗಳು. ನಾನು ಈ ಪ್ರಶಸ್ತಿಯನ್ನು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಶಾಶ್ವತ ಸ್ನೇಹಕ್ಕೆ ಅರ್ಪಿಸುತ್ತೇನೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸ್ಲೊವಾಕಿಯಾಕ್ಕೆ ಭೇಟಿ ನೀಡಿ ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ವಿದೇಶಾಂಗ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಮತ್ತು ಹೆಚ್ಚುವರಿ ಕಾರ್ಯದರ್ಶಿ ಪೂಜಾ ಕಪೂರ್ ಇದ್ದರು.

ಸ್ಲೋವಾಕಿಯಾ 1993ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದೆ. ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಅವರನ್ನು ಭೇಟಿ ಮಾಡಿರುವ ಮೋದಿ, ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಯ ಗುರಿ ಹೊಂದಿರುವ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದ್ದಾರೆ. ಕಳೆದ 2025ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸ್ಲೋವಾಕಿಯಾ ಭೇಟಿ ಮತ್ತು ಈ ವರ್ಷಾರಂಭದಲ್ಲಿ ಅಧ್ಯಕ್ಷ ಪೆಲ್ಲೆಗ್ರಿನಿ ಅವರು ಎಐ ಇಂಪ್ಯಾಕ್ಟ್ ಶೃಂಗಸಭೆಗಾಗಿ ಕೈಗೊಂಡ ಭಾರತ ಪ್ರವಾಸದ ನಂತರ, ಎರಡೂ ದೇಶಗಳ ನಡುವೆ ಬೆಳೆಯುತ್ತಿರುವ ಸಂಬಂಧದ ಮಧ್ಯೆ ಪ್ರಧಾನಿ ಮೋದಿ ಅವರ ಈ ಭೇಟಿ ಮಹತ್ವ ಪಡೆದಿದೆ. ಫ್ರಾನ್ಸ್‌ನಿಂದ ಎರಡು ದಿನಗಳ ಭೇಟಿಗಾಗಿ ಬ್ರಾಟಿಸ್ಲಾವಾಕ್ಕೆ ಆಗಮಿಸಿದ ನರೇಂದ್ರ ಮೋದಿಗೆ ಸ್ಲೋವಾಕಿಯಾ ಅಧ್ಯಕ್ಷರು ಆತ್ಮೀಯ ಸ್ವಾಗತ ನೀಡಿದ್ದರು ಎಂದು ತಿಳಿದುಬಂದಿದೆ.