ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಕುಡಿದು ತಾಯಿಗೆ ಹಿಂಸೆ ನೀಡುತ್ತಿದ್ದ ತಂದೆಯನ್ನು ಕೊಲೆ ಮಾಡಿ, ಆಕಸ್ಮಿಕ ಅಪಘಾತವೆಂದು ಬಿಂಬಿಸಿದ್ದ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಪ್ರತಿದಿನ ಮದ್ಯಪಾನ ಮಾಡಿ ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದ ತಂದೆಯ ಕಿರುಕುಳಕ್ಕೆ ಬೇಸತ್ತು, ಮಗನೇ ತಂದೆಯನ್ನು ಮಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಹನುಮನಹಳ್ಳಿ ಗ್ರಾಮದ ನಿವಾಸಿ 55 ವರ್ಷದ ಕೆಂಚೇಗೌಡ ಮೃತ ವ್ಯಕ್ತಿ. ಇತ್ತೀಚೆಗೆ ಕೆಂಚೇಗೌಡ ಪತ್ನಿಯ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಿದ್ದರು. ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮನೆಯಲ್ಲಿ ಪ್ರತಿನಿತ್ಯ ತಂದೆ ನಡೆಸುತ್ತಿದ್ದ ದೌರ್ಜನ್ಯ ಹಾಗೂ ಅಮ್ಮ ಅನುಭವಿಸುತ್ತಿದ್ದ ನರಕಯಾತನೆಯನ್ನು ಕಂಡು ಎರಡನೇ ಮಗ ಕುಮಾರ್ ಜೂನ್ 10ರ ಸಂಜೆ ಮನೆಯಲ್ಲಿದ್ದ ಮಣೆಯಿಂದ ತಂದೆಯ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾಗಿ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದನು ಎನ್ನಲಾಗುತ್ತಿದೆ.

ಹಾಗೂ ಗಂಭೀರವಾಗಿ ಗಾಯಗೊಂಡ ಕೆಂಚೇಗೌಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು. ಈ ಕುರಿತು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಪ್ರತಿಕ್ರಿಯಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರುದಿನ ಮೃತರ ಕುಟುಂಬಸ್ಥರು ಠಾಣೆಗೆ ಬಂದು ದೂರು ನೀಡಿದ್ದಾರೆ. ಆರಂಭದಲ್ಲಿ ಗೊಂದಲದಲ್ಲಿದ್ದ ಕುಟುಂಬಸ್ಥರು ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದರಿಂದ, ಪೊಲೀಸರು ಮೊದಲಿಗೆ 174 ಯುಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಪೊಲೀಸರು ಶವಾಗಾರಕ್ಕೆ ತೆರಳಿ ಮೃತದೇಹವನ್ನು ಪರಿಶೀಲಿಸಿದಾಗ ಅವರ ತಲೆ ಹಾಗೂ ಕೆಳಹೊಟ್ಟೆಯ ಭಾಗದಲ್ಲಿ ತೀವ್ರವಾದ ಗಾಯಗಳಿರುವುದು ಕಂಡು ಬಂದಿದೆ. ಈ ಗಾಯಗಳನ್ನು ಗಮನಿಸಿದಾಗ ಇದು ಅಪಘಾತವಲ್ಲ, ಬದಲಿಗೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮೃತರ ಮನೆಯವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇದು ತೀವ್ರ ಸ್ವರೂಪದ ಹಲ್ಲೆಯಿಂದ ನಡೆದ ಕೊಲೆ ಎಂಬ ಸತ್ಯ ಬೆಳಕಿಗೆ ಬಂದಿದೆ.

ಹೀಗಾಗಿ ಪೊಲೀಸರು ಈ ಪ್ರಕರಣಕ್ಕೆ ಕೊಲೆ ಪ್ರಕರಣದ ಸೆಕ್ಷನ್ ಸೇರ್ಪಡೆಗೊಳಿಸಿ ತನಿಖೆ ಮುಂದುವರಿಸಿದ್ದರು. ಸಂದೇಹದ ಆಧಾರದ ಮೇಲೆ ಮಗ ಕುಮಾರ್ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ತಾನೇ ತಂದೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು. ಮೃತರ ಪತ್ನಿಯೇ ಈ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಮೃತ ಕೆಂಚೇಗೌಡ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಅವರಲ್ಲಿ ಎರಡನೇ ಮಗನೇ ಈ ಕೃತ್ಯ ಎಸಗಿರುವ ಆರೋಪಿ. ಕೆಂಚೇಗೌಡ ಅವರಿಗೆ ವಿಪರೀತ ಕುಡಿತದ ಚಟವಿತ್ತು. ಹಾಗೂ ಮನೆಯಲ್ಲಿ ಪದೇ ಪದೆ ಕೌಟುಂಬಿಕ ಕಲಹಗಳು ಮತ್ತು ದೌರ್ಜನ್ಯಗಳು ನಡೆಯುತ್ತಿದ್ದವು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈ ಕೌಟುಂಬಿಕ ಕಲಹವೇ ಕೊಲೆಗೆ ಮುಖ್ಯ ಪ್ರೇರಣೆಯಾಗಿರುವ ಸಾಧ್ಯತೆಯಿದ್ದು, ಹಲ್ಲೆಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಘಟನೆಯ ಸಂಪೂರ್ಣ ವಿವರ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು ಎನ್ನಲಾಗುತ್ತಿದೆ.















