ಮನೆ ರಾಷ್ಟ್ರೀಯ ಕಾಮನ್‌ವೆಲ್ತ್‌ ಕ್ರೀಡಾಕೂಟ: ಅಥ್ಲೀಟ್‌ಗಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ

ಕಾಮನ್‌ವೆಲ್ತ್‌ ಕ್ರೀಡಾಕೂಟ: ಅಥ್ಲೀಟ್‌ಗಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ

0

ನವದೆಹಲಿ (New Delhi): ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತೀಯ ಅಥ್ಲೀಟ್‌ಗಳ ಜತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

ಜುಲೈ 28ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದ ಆರಂಭವಾಗಲಿದೆ. ಆಗಸ್ಟ್‌ 8ರವರಗೆ ಕ್ರೀಡಾಕೂಟ ನಡೆಯಲಿದೆ. 19 ಕ್ರೀಡಾ ವಿಭಾಗಗಳಲ್ಲಿ ನಡೆಯುವ 141 ಸ್ಪರ್ಧೆಗಳಲ್ಲಿ ಭಾಗವಹಿಸುವ ಒಟ್ಟು 215 ಅಥ್ಲೀಟ್‌ಗಳು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಾಮನ್‌ವೆಲ್ತ್‌ ಕೂಟದಲ್ಲಿ 72 ದೇಶಗಳ ಐದು ಸಾವಿರಕ್ಕೂ ಅಧಿಕ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌‌ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತೀಯ ಅಥ್ಲೀಟ್‌ಗಳ ಜತೆ ಮೋದಿ ಸಂವಾದ ನಡೆಸಿದ್ದರು.

ಬರ್ಮಿಂಗ್‌ಹ್ಯಾಂನಲ್ಲಿ ಜುಲೈ 28 ರಂದು ಆರಂಭವಾಗುವ ಕಾಮನ್‌ವೆಲ್ತ್‌ ಕ್ರೀಡಾಕೂಟದ 12 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಎಜ್‌ಬಾಸ್ಟನ್‌ನಲ್ಲಿ ಜುಲೈ 31 ರಂದು ನಡೆಯಲಿರುವ ಭಾರತ–ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ಪಂದ್ಯದ ಟಿಕೆಟ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ.

ಕಾಮನ್‌ವೆಲ್ತ್‌ ಕೂಟದಲ್ಲಿ ಇದೇ ಮೊದಲ ಬಾರಿ ಮಹಿಳಾ ಕ್ರಿಕೆಟ್‌ ಸೇರಿಸಲಾಗಿದೆ. 2012ರ ಲಂಡನ್‌ ಒಲಿಂಪಿಕ್ಸ್ ಬಳಿಕ ಬ್ರಿಟನ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟ ಇದಾಗಲಿದೆ ಎಂದು ಕ್ರೀಡಾಕೂಟದ ಸಿಇಒ ಇಯಾನ್‌ ರೀಡ್ ಹೇಳಿದ್ದಾರೆ.