ನವದೆಹಲಿ(Newdelhi): ಕೋವಿಡ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಕೊರೊನಾ ಲಸಿಕೆ 200 ಕೋಟಿ ತಲುಪಿರುವ ಹಿನ್ನೆಯಲೆಯಲ್ಲಿ ಲಸಿಕೆ ಹಾಕಿದ ವೈದ್ಯರು, ದಾದಿಯರು, ಮುಂಚೂಣಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾರೆ.
ಜುಲೈ 17 ರಂದು ಲಸಿಕೆಯ 200 ಕೋಟಿ ಡೋಸ್ ನೀಡಿದ ಹೆಗ್ಗುರುತನ್ನು ಸಾಧಿಸಿದ್ದು, ಈ ಮಹತ್ತರ ಕಾರ್ಯದಲ್ಲಿ ಪಾಲುದಾರರಾಗಿರುವ ಲಸಿಕೆ ನೀಡಿದ ನೋಂದಾಯಿತರಿಗೆ ವೈಯಕ್ತಿಕವಾಗಿ ಅಭಿನಂದನಾ ಪತ್ರವನ್ನು ಪ್ರಧಾನಿ ಮೋದಿ ಬರೆದಿದ್ದಾರೆ. ಎಲ್ಲ ವ್ಯಾಕ್ಸಿನೇಟರ್ಗಳು ಇದನ್ನು ಕೋವಿನ್ ಲಾಗಿನ್ ಐಡಿಯಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
2021 ರ ಜನವರಿ 1 ರಂದು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು. 2021ರ ಜನವರಿ 16 ರಿಂದ ದೇಶಾದ್ಯಂತ ಕೋವಿನ್ ವೇದಿಕೆಯ ಮೂಲಕ ಲಸಿಕಾಭಿಯಾನ ಶುರುವಾಗಿತ್ತು.
ಬಿಲ್ ಗೇಟ್ಸ್ ಅಭಿನಂದನೆ
ಇದೇ ವೇಳೆ ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ 200 ಕೋಟಿಯ ಲಸಿಕೆ ದಾಖಲೆಗಾಗಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.