ಮನೆ ದೇವಸ್ಥಾನ ಚುಂಚನಕಟ್ಟೆಯ ಕೋದಂಡರಾಮ ದೇವಾಲಯ

ಚುಂಚನಕಟ್ಟೆಯ ಕೋದಂಡರಾಮ ದೇವಾಲಯ

0

ಕೃಷ್ಣರಾಜನಗರಕ್ಕೆ ಸಮೀಪದಲ್ಲೇ ಕಾವೇರಿ ನದಿಯ ಬಲ ದಂಡೆಯ ಮೇಲಿರುವ ಪುಣ್ಯಕ್ಷೇತ್ರ ಚುಂಚನಕಟ್ಟೆ. ತ್ರೇತಾಯುಗ ಪುರುಷ ಶ್ರೀರಾಮಚಂದ್ರನ ಪಾದದೂಳಿಯಿಂದ ಪಾವನವಾದ ಇಲ್ಲಿ ಚಾಲುಕ್ಯರು ರಾಮ ದೇವಾಲಯ ಕಟ್ಟಿಸಿದರೆಂದು ಹೇಳಲಾಗುತ್ತಾದರೂ ಅದಕ್ಕೆ ಯಾವುದೇ ಆಧಾರವಿಲ್ಲ.ಆದರೆ ಮೈಸೂರು ಅರಸರಾಗಿದ್ದ ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರು ಸುಂದರವಾದ ಕೋದಂಡರಾಮ ದೇವಾಲಯ ನಿರ್ಮಿಸಿದರು ಎಂಬುದಕ್ಕೆ ದಾಖಲೆಗಳು ದೊರಕುತ್ತವೆ.

ಸ್ಥಳ ಪುರಾಣದ ಒಂದು ಕಥೆಯ ರೀತ್ಯ ಶ್ರೀರಾಮಚಂದ್ರನ ಪರಮಭಕ್ತನಾಗಿದ್ದ ಚುಂಚ ಎಂಬ ಋಷಿ ಇಲ್ಲಿ ನೆಲೆಸಿ ಶ್ರೀರಾಮನ ನಿರೀಕ್ಷೆಯಲ್ಲಿದ್ದನೆಂದೂ, ಶ್ರೀರಾಮ ಅರಣ್ಯ ವಾಸದಲ್ಲಿದ್ದಾಗ ಸೀತಾ, ಲಕ್ಷ್ಮಣ ಸಮೇತನಾಗಿ ಇಲ್ಲಿಗೆ ಆಗಮಿಸಿ ಚುಂಚ ಮಹರ್ಷಿಗಳಿಗೆ ದರ್ಶನ ನೀಡಿದನೆಂದೂ, ಹೀಗಾಗಿ ಈ ಕ್ಷೇತ್ರ ಚುಂಚನಕಟ್ಟೆ ಎಂದು ಖ್ಯಾತವಾಯಿತೆಂದೂ ತಿಳಿದುಬರುತ್ತದೆ.

ಮತ್ತೊಂದು ಕಥೆಯ ರೀತ್ಯ ಈ ಪ್ರದೇಶದಲ್ಲಿ ಚುಂಚ ಮತ್ತು ಚುಂಚಿಯರೆಂಬ ರಾಕ್ಷಸರು ವಾಸವಾಗಿದ್ದರು. ಸುತ್ತ ಮುತ್ತಲ ನಿವಾಸಿಗಳಿಗೆ ಅವರು ವಿಪರೀತ ಕಾಟ ಕೊಡುತ್ತಿದ್ದರು. ಋಷಿ ಮುನಿಗಳಿಗೆ ಯಗ್ನ ಯಾಗ ಮಾಡದಂತೆ ಅಡ್ಡಿ ಪಡಿಸುತ್ತಿದ್ದರು. ವನವಾಸಕಾಲದಲ್ಲಿ ಯುಗ ಪುರುಷ ರಾಮ ಇಲ್ಲಿಗೆ ಬಂದಾಗ ಋಷಿ ಮುನಿಗಳು, ಜನರು ತಮ್ಮ ನೋವು ತೋಡಿಕೊಂಡು, ತಮಗೆ ಈ ರಾಕ್ಷಸರಿಂದ ಮುಕ್ತಿ ನೀಡುವಂತೆ ಕೋರಿದರು. ಆಗ ಶ್ರೀರಾಮ ಚುಂಚ ಚುಂಚಿಯರನ್ನು ಸಂಹರಿಸಿ, ಒಂದು ಕಟ್ಟೆಯ ಮೇಲೆ ಕುಳಿತನಂತೆ. ಹೀಗಾಗಿ ಈ ಪ್ರದೇಶಕ್ಕೆ ಚುಂಚನ ಕಟ್ಟೆ ಎಂದು ಹೆಸರು ಬಂತೆನ್ನುತ್ತಾರೆ.
ಈ ಪವಿತ್ರವಾದ ಸ್ಥಳದಲ್ಲಿ ಈಗ ಭವ್ಯವಾದ ದ್ರಾವಿಡ ಶೈಲಿಯ ದೇವಾಲಯವಿದೆ. ದೇವಾಲಯಕ್ಕೆ ಹೋಗಲು 30 ಮೆಟ್ಟಿಲುಗಳನ್ನು ಏರಿದರೆ ವಿಜಯನಗರ ಶೈಲಿಯ ರಾಜಗೋಪುರ ಸ್ವಾಗತಿಸುತ್ತದೆ. ಮೂರು ಅಂತಸ್ತಿನ ಈ ಗೋಪುರದಲ್ಲಿ ಜಯವಿಜಯರ ಹಾಗೂ ದೇವತೆಗಳ ಗಾರೆ ಶಿಲ್ಪಗಳಿವೆ. ಪ್ರವೇಶದ್ವಾರದ ಒಳ ಪ್ರವೇಶಿಸಿದರೆ ದೊಡ್ಡ ಪ್ರಾಕಾರವಿದೆ. ದೇವಾಲಯ ನೋಡಲು ಸಾಮಾನ್ಯವಾಗಿದೆ. ಆದರೆ, ಒಳ ಭಿತ್ತಿಗಳಲ್ಲಿ ದಶಾವತಾರ ಚಿತ್ರಗಳಿವೆ.

ಗರ್ಭಗೃಹದಲ್ಲಿ ಸೀತಾ, ಲಕ್ಷ್ಮಣ ಸಹಿತನಾಗಿ ಬಿಲ್ಲು (ಕೋದಂಡ) ಹಿಡಿದು ನಿಂತ ಶ್ರೀರಾಮಚಂದ್ರನ ಸುಂದರ ಮೂರ್ತಿಯಿದೆ. ಸೀತಾ ಮಾತೆ ಇಲ್ಲಿ ಶ್ರೀರಾಮಚಂದ್ರ ಮೂರ್ತಿಯ ಬಲ ಭಾಗದಲ್ಲಿರುವುದು ವಿಶೇಷ. ಈ ದೇಗುಲದಲ್ಲಿ ಮತ್ತೂ ಒಂದು ವಿಶೇಷ ಇದೆ. ಎಲ್ಲಿ ರಾಮನೋ ಅಲ್ಲಿ ಹನುಮನು ಎಂಬ ಮಾತನ್ನು ನೀವು ಕೇಳಿದ್ದೀರಿ. ಆದರೆ, ಈ ದೇವಾಲಯದಲ್ಲಿ ಸೀತಾ, ಲಕ್ಷ್ಮಣ ಸಮೇತ ಶ್ರೀರಾಮ ದೇವರ ಮೂರ್ತಿಯ ಜೊತೆ ಹನುಮನಿಲ್ಲ. ಇಲ್ಲಿ ಕನ್ನಡ ಕುಲ ಪುಂಗವ ಹನುಮ ಇಲ್ಲದಿರುವುದಕ್ಕೂ ಕಾರಣ ಇದೆ. ವನವಾಸ ಕಾಲದಲ್ಲಿ ಶ್ರೀರಾಮ ಇಲ್ಲಿಗೆ ಬಂದಾಗ, ಇನ್ನೂ ಸೀತಾಪಹರಣ ಆಗಿರಲಿಲ್ಲ. ಜೊತೆಗೆ ಕಿಷ್ಕಿಂದೆಯಲ್ಲಿದ್ದ ಹನುಮನ ಪರಿಚಯವೂ ರಾಮನಿಗೆ ಆಗಿರಲಿಲ್ಲವಂತೆ ಹೀಗಾಗಿ ಇಲ್ಲಿ ಹನುಮನಿಲ್ಲ ಎನ್ನುತ್ತಾರೆ ಅರ್ಚಕರು.    

ದೇವಾಲಯದ ಪ್ರವೇಶ ದ್ವಾರದ ಎಡ ಬಲ ಗೋಡೆಗಳಲ್ಲಿ ನಾಗಬಂಧದ ಶಿಲಾಫಲಕಗಳಿವೆ. ದೇವಾಲಯದ ಸುತ್ತ ಹಲವು ಪುಟ್ಟ ಮಂಟಪಗಳಿವೆ. ದೇವಾಲಯದ ಪ್ರಾಂಗಣದಲ್ಲಿ ಶ್ರೀ ರಾಮನ ವಿವಿಧ ಅವತಾರಗಳ ತೈಲ ವರ್ಣಚಿತ್ರಣಗಳಿವೆ. ಗೋಡೆಗಳ ಮೇಲೆ ರಾಮ ಸೀತೆ, ಲಕ್ಷ್ಮಣರ ಅನೇಕ ಬಗೆಯ ಚಿತ್ರಗಳಿವೆ.

ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿಯಲ್ಲಿ ಚುಂಚನಕಟ್ಟೆಯಲ್ಲಿ ಶ್ರೀರಾಮದೇವರ ರಥೋತ್ಸವ ಹಾಗೂ ದೊಡ್ಡ ಜಾತ್ರೆ ನಡೆಯುತ್ತದೆ. ಚುಂಚನಕಟ್ಟೆಯ ಬಳಿ ಕಾವೇರಿ ನದಿ 70 ಅಡಿ ಎತ್ತರದಿಂದ ಧುಮುಕ್ಕಿ ಜಲಪಾತವನ್ನು ಸೃಷ್ಟಿಸಿದೆ. ದನುಷ್ಕೋಟಿ ಎಂದು ಸ್ಥಳೀಯರು ಕರೆಯುವ ಈ ಜಲಪಾತದ ಮೊರೆತ ಗಾವುದ ಗಾವುದಕ್ಕೆಕೇಳುತ್ತದೆ. ಆದರೆ ದೇವಾಲಯದ ಗರ್ಭಗುಡಿಯಲ್ಲಿ ಈ ಶಬ್ದ ಕೇಳುವುದಿಲ್ಲ. ಇದುಮತ್ತೊಂದು ವಿಶೇಷ. ಮಳೆಗಾಲದಲ್ಲಿ ಜಲಪಾತದ ನೋಟ ರಮಣೀಯ. ಜೂನ್ ತಿಂಗಳಿನಲ್ಲಿ ಈ ಹರಿವ ನೀರಿನಲ್ಲಿ ಸೀಗೆಪುಡಿ ಮಿಶ್ರಿತವಾಗಿರುತ್ತದೆ ಎಂದೂ ಹೇಳುತ್ತಾರೆ. ಇಲ್ಲಿ ಜಲಾಶಯವನ್ನೂ ನಿರ್ಮಿಸಲಾಗಿದೆ.

ಇಲ್ಲಿ ಭಕ್ತಾದಿಗಳಿಗೆ, ಪ್ರವಾಸಿಗರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿಲ್ಲ. ಆದರೆ 4 ಕಿ.ಮೀ ದೂರದ ಸಾಲಿಗ್ರಾಮದಲ್ಲಿ ವಸತಿ ಸೌಕರ್ಯವಿದೆ.  ಮೈಸೂರಿನಿಂದ 50 ಕಿ.ಮೀ, ಕೆ.ಆರ್. ನಗರದಿಂದ 15 ಕಿ.ಮೀ ದೂರದಲ್ಲಿರುವ ಚುಂಚನಕಟ್ಟೆಗೆ ಬರಲು ಸಾಕಷ್ಟು  ಬಸ್ ಸೌಲಭ್ಯಗಳಿವೆ.