ಬೆಂಗಳೂರು(Bengaluru) : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮೇಲೆ ತ್ರಿವರ್ಣ ಧ್ವಜ ಕಟ್ಟುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಗರದ ಹೆಚ್ ಬಿಆರ್ ಲೇಔಟ್ ನಲ್ಲಿ ನಡೆದಿದೆ.
ಮೃತರನ್ನು ವಿಶುಕುಮಾರ್ (33) ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ವಿಶುಕುಮಾರ್ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು.
ಭಾನುವಾರ ಮಧ್ಯಾಹ್ನ 1.45 ಸುಮಾರಿಗೆ ತ್ರಿವರ್ಣ ಧ್ವಜ ಕಟ್ಟಲು ಎರಡನೇ ಮಹಡಿಯಲ್ಲಿನ ಮನೆ ಟೆರೇಸ್ ಮೇಲೆ ಏರಿದ್ದರು. ಈ ವೇಳೆ ಆಯತಪ್ಪಿ 30 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ವಿಶುಕುಮಾರ್ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ವಿಶುಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತರು ಹೆಂಡತಿ ಹಾಗೂ 2 ವರ್ಷದ ಮಗುವನ್ನು ಅಗಲಿದ್ದಾರೆ.
ಮಗನ ಸಾವಿನ ಸಂಬಂಧ ವಿಶುಕುಮಾರ್ ತಂದೆ ನಾರಾಯಣ ಭಟ್ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.