ಬೆಂಗಳೂರು : ಇನ್ನೇನು ಕೋರ್ಟ್ ತೀರ್ಪು ನೀಡುವ ಮೊದಲೇ 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಸಾವನ್ನಪ್ಪಿದ್ದಾನೆ. ಅಬ್ದುಲ್ ಖಾದರ್ (60) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ 2010ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಖಾದರ್‌ಗೆ ಶುಕ್ರವಾರ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅಬ್ದುಲ್ನನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ, ಮಾರ್ಗಮಧ್ಯೆ ಹೃದಯಾಘಾತದಿಂದ ಅಬ್ದುಲ್ ಖಾದರ್ ಮೃತಪಟ್ಟಿದ್ದಾನೆ ಎಂದು ತಿಲಿದುಬಂದಿದೆ.

ಈ ಪ್ರಕರಣ ಕುರಿತು ಅಬ್ದುಲ್ ಖಾದರ್ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಕ್ಷಣ ಜೈಲು ಅಧಿಕಾರಿಗಳು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಬ್ದುಲ್ ಖಾದರ್ ವಿರುದ್ಧದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇತ್ತು.

ಆದರೆ ನ್ಯಾಯಾಲಯದ ತೀರ್ಪು ಹೊರಬೀಳುವ ಮುನ್ನವೇ ಅಬ್ದುಲ್ ಖಾದರ್ ಕೊನೆಯುಸಿರೆಳೆದಿದ್ದಾನೆ. ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿಯಾಗಿದ್ದ ಅಬ್ದುಲ್ ಖಾದರ್, ಕಳೆದ 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ಅಬ್ದುಲ್ ಖಾದರ್ ನನ್ನು ಬಂಧಿಸಿತ್ತು ಎನ್ನಲಾಗುತ್ತಿದೆ.















