ಲಖಿಂಪುರ ಖೇರಿ(ಉತ್ತರ ಪ್ರದೇಶ): ಖಾಸಗಿ ಬಸ್ ಹಾಗೂ ಟ್ರಕ್ ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ 8 ಮಂದಿ ಸಾವನ್ನಪ್ಪಿರುವ ಘಟನೆ ಖಮರಿಯಾ ಪೊಲೀಸ್ ಪೋಸ್ಟ್ ಬಳಿ ಶಾರದಾ ನದಿಯ ಸೇತುವೆಯ ಮೇಲೆ ನಡೆದಿದೆ.
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಲಖಿಂಪುರಕ್ಕೆ ಧೌರಹರಾದಿಂದ ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ಖಾಸಗಿ ಬಸ್ಸೊಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಭೀಕರ ರಸ್ತೆ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿದ್ದ 8 ಮಂದಿ ಜನರು ಸಾವನ್ನಪ್ಪಿದ್ದಾರೆ. ಹಾಗೂ ಹಲವರಿಗೆ ಗಾಯವಾಗಿದೆ. ಈ ಘಟನೆಯಿಂದಾಗಿ 24 ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾಹಿತಿ ಪಡೆದು ಸ್ಥಳೀಯರ ಸಹಾಯದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ ನೀಡಿದರು.