ಚಾಮರಾಜನಗರ(Chamarajanagar): ಚಾಲಕನ ನಿಯಂತ್ರಣ ಪರಿಣಾಮ ಕೆಎಸ್’ಆರ್’ಟಿಸಿ ಬಸ್ ಹಳ್ಳಕ್ಕೆ ನುಗ್ಗಿದ್ದು 22 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ 8 ಗಂಟೆಗೆ ತಾಳಬೆಟ್ಟದ ಬಳಿ ನಡೆದಿದೆ.
ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಮುಗಿಸಿಕೊಂಡು ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಳ್ಳಕ್ಕೆ ನುಗ್ಗಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ಸಿನಲ್ಲಿ 51 ಪ್ರಯಾಣಿಕರಿದ್ದರು. ಈ ಪೈಕಿ 22 ಜನರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.
ಕೊಳ್ಳೇಗಾಲ ಕೆಎಸ್ಆರ್ ಟಿಸಿ ಡಿಪೊ ಮ್ಯಾನೇಜರ್ ಸುಬ್ರಹ್ಮಣ್ಯ ಘಟನೆ ಕುರಿತು ಪ್ರತಿಕ್ರಿಯಿಸಿ, ತೀವ್ರ ತಿರುವಿನಿಂದಾಗಿ ಚಾಲಕನ ನಿಯಂತ್ರಣಕ್ಕೆ ಬರದೆ ಹಳ್ಳಕ್ಕೆ ನುಗ್ಗಿದೆ. ಕೆಲವು ಜನರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.