ಮನೆ ಅಪರಾಧ ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನ: ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನ: ಮೂವರು ಆರೋಪಿಗಳು ಪೊಲೀಸರ ವಶಕ್ಕೆ

0

ಶಿವಮೊಗ್ಗ(Shivamogga): ಸಾಗರ ಪಟ್ಟಣದ ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಎಸ್​ಪಿ ಮಿಥುನ್ ಕುಮಾರ್, ಸಮೀರ್(ಎ1), ಇಮಿಯಾನ್ ಹಾಗೂ ಮನ್ಸೂರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಹಲ್ಲೆ ಪ್ರಕರಣದ ಎ1 ಆರೋಪಿ ಸಮೀರ್ ಎಂಬಾತನ ತಂಗಿಯನ್ನು ಸುನೀಲ್​ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವುದಾಗಿ ತನಿಖೆ ವೇಳೆ ಸಮೀರ್​ ಬಾಯ್ಬಿಟ್ಟಿದ್ದಾನೆ ಎಂದು ತಿಳಿಸಿದರು.

ತಂಗಿಯನ್ನು ಚುಡಾಯಿಸುತ್ತಿರುವ ಬಗ್ಗೆ ಸುನೀಲ್​’ಗೆ ಸಮೀರ್ ಎಚ್ಚರಿಕೆ ನೀಡಿದ್ದ. ಅಲ್ಲದೇ ತಂಗಿಯ ನಂಬರ್ ಕೊಡು ಅಂತ ಸಮೀರ್​’ಗೆ ಸುನೀಲ್​ ಕೇಳಿದ್ದನಂತೆ. ಹಲವು ಬಾರಿ ಎಚ್ಚರಿಕೆ‌ ನೀಡಿದರೂ ಚುಡಾಯಿಸುವುದನ್ನು ನಿಲ್ಲಿಸಿರಲಿಲ್ಲ. ಅದರಂತೆಯೇ ಸೋಮವಾರ ಬೈಕ್​’ನಲ್ಲಿ ಬರುತ್ತಿದ್ದ ಸಮೀರ್​’ನನ್ನು ಸುನೀಲ್ ರೇಗಿಸಿದ್ದ. ಇದರಿಂದ ಕೋಪಗೊಂಡ ಸಮೀರ್ ತನ್ನ ಬೈಕಿನಲ್ಲಿದ್ದ ಮಚ್ಚು ತೆಗೆದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆ ವೇಳೆ ಹೇಳಿದ್ದಾನೆ ಎಂದರು.

ಸಮೀರ್ ಒಬ್ಬ​ ಕುರಿಗಾಹಿ ಯುವಕನಾಗಿದ್ದು, ಎಂದಿನಂತೆ ಕುರಿಗಳಿಗೆ ಸೊಪ್ಪು ತರಲು ಬೈಕಿನಲ್ಲಿ ಕತ್ತಿಯನ್ನು ಇಟ್ಟುಕೊಂಡಿದ್ದ. ಅದರಿಂದಲೇ ಹಲ್ಲೆಗೆ ಮುಂದಾಗಿದ್ದಾನೆ ಎಂದು ​ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಸ್ನೇಹಿತರಾದ ಇಮಾಯಿನ್ ಮತ್ತು ಮನ್ಸೂರ್​ ಅನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಇವರ ಪಾತ್ರ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿ ವಿಚಾರಣೆ ಬಳಿಕವಷ್ಟೇ ತಿಳಿಯಲಿದೆ ಎಂದು ತಿಳಿಸಿದರು.