ಮನೆ ಅಪರಾಧ ಯೂಟ್ಯೂಬ್ ವಿಡಿಯೋ ನೋಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಯೂಟ್ಯೂಬ್ ವಿಡಿಯೋ ನೋಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

0

ಉಡುಪಿ: ಯೂಟ್ಯೂಬ್ ವಿಡಿಯೋ ನೋಡಿ 11 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ.

ಪ್ರವೀಣ್ ಶೆಟ್ಟಿ ಎಂಬವರ ಪುತ್ರಿ ಮಂಗಳಾದೇವಿ (11) ಮೃತ ಬಾಲಕಿ. ಕುಂಜಾರುಗಿರಿಯ ಖಾಸಗಿ ಶಾಲೆಯಲ್ಲಿ ಈ ಬಾಲಕಿ 6ನೇ ತರಗತಿಯಲ್ಲಿ ಓದುತ್ತಿದ್ದಳು.

ಪೊಲೀಸರ ಮಾಹಿತಿ ಪ್ರಕಾರ, ಶನಿವಾರ ಶಾಲೆಗೆ ಸರ್ಕಾರಿ ರಜೆ ಇತ್ತು. ಆಕೆಯ ಪೋಷಕರು ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಹಿಂದಿರುಗಿದಾಗ ಮಲಗುವ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನಂತರ ಬಾಗಿಲು ಒಡೆದು ನೋಡಿದಾಗ ಮಂಗಳಾದೇವಿ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಪೋಷಕರು ಬೆಚ್ಚಿಬಿದ್ದಿದ್ದಾರೆ.

ಮಂಗಳಾದೇವಿ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಆಕೆಯ ಬೆಡ್ ರೂಂನಲ್ಲಿ ಪೊಲೀಸರಿಗೆ ಟ್ಯಾಬ್ ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಂಗಳಾದೇವಿ ಯೂಟ್ಯೂಬ್ ವಿಡಿಯೋ ನೋಡಿದ್ದಳು. ಅದರಲ್ಲಿನ ಪ್ರಯೋಗ ಮಾಡಲು ಹೋಗಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.