ಮನೆ ರಾಜಕೀಯ ಭವಾನಿ ರೇವಣ್ಣ ಹಾಸನಕ್ಕೆ ಅನಿವಾರ್ಯ ಅಲ್ಲ, ಆದರೆ ಸೂಕ್ತ: ಸೂರಜ್ ರೇವಣ್ಣ

ಭವಾನಿ ರೇವಣ್ಣ ಹಾಸನಕ್ಕೆ ಅನಿವಾರ್ಯ ಅಲ್ಲ, ಆದರೆ ಸೂಕ್ತ: ಸೂರಜ್ ರೇವಣ್ಣ

0

ಹಾಸನ(Hassan): ಭವಾನಿ ರೇವಣ್ಣ ಹಾಸನಕ್ಕೆ ಅನಿವಾರ್ಯ ಅಲ್ಲ, ಆದರೆ ಸೂಕ್ತ ಎಂದು ಹೇಳಲು ಬಯಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.

ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಸ್ಪರ್ಧಿಸುವಂತಹ ಅನಿವಾರ್ಯತೆ ಇಲ್ಲ ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು ಪಕ್ಷದ ಹಿರಿಯ ರಾಜಕಾರಣಿ. ನಾವು ಅವರ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ. ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದರು.

ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. 2018ರಲ್ಲಿ ಹಾಸನ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. 2023ರಲ್ಲಿ ಮತ್ತೆ ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ನಾನು ರಾಜಕಾರಣದಲ್ಲಿ ಕಿರಿಯನಾಗಿರಬಹುದು. ಒಂದು ವರ್ಷದಿಂದ ವಿಧಾನ ಪರಿಷತ್‌ ಸದಸ್ಯನಾಗಿದ್ದು, ಹಾಸನ ತಾಲ್ಲೂಕನ್ನು ನೋಡೆಲ್‌ ಕ್ಷೇತ್ರವಾಗಿ ತೆಗೆದುಕೊಂಡು ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಭಾಗವಹಿಸಿ, ಜನರ ನಾಡಿಮಿಡಿತ ಅರಿತಿದ್ದೇನೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆಯ ಕುರಿತು ಎಚ್.ಡಿ. ರೇವಣ್ಣ ಹಾಗೂ ದೇವೇಗೌಡರು ಕುಳಿತುಕೊಂಡು ತೀರ್ಮಾನ ಕೈಗೊಳ್ಳುತ್ತಾರೆ. ದೇವೇಗೌಡರ ತೀರ್ಮಾನವೇ ಅಂತಿಮ. ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡುವ ವಿಷಯವಲ್ಲ ಎಂದರು.

ಇತ್ತೀಚಿನ ಲೆಕ್ಕಾಚಾರವನ್ನು ಗಮನಿಸಿದರೆ ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಗೆಲುವು ಖಚಿತ ಎಂದು ಭವಿಷ್ಯ ನುಡಿದ ಸೂರಜ್ ರೇವಣ್ಣ, 15 ವರ್ಷದಿಂದ ಸತತವಾಗಿ ಆರರಿಂದ ಏಳು ಜನ ಶಾಸಕರನ್ನು ಆಯ್ಕೆ ಮಾಡುವಲ್ಲಿ ರೇವಣ್ಣ ಅವರ ಪ್ರಯತ್ನ ಅಪಾರವಾಗಿದೆ. ಅವರನ್ನು ಬಿಟ್ಟರೆ ಇನ್ನಾರಿಗೂ ಈ ಜಿಲ್ಲೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು.