ಮನೆ ಸುದ್ದಿ ಜಾಲ ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರ ಸಾವು: ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ

ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರ ಸಾವು: ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ

0
ಸಾಂದರ್ಭಿಕ ಚಿತ್ರ

ಗೋಣಿಕೊಪ್ಪಲು (ಕೊಡಗು): ಕೇರಳ ಗಡಿಭಾಗ ಪಲ್ಲೇರಿ ಗ್ರಾಮದಲ್ಲಿ ಕೃಷಿ ಕಾರ್ಮಿಕನ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಕಾರ್ಮಿಕ ರಾಜು(75)  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಸೋಮವಾರ ಬೆಳಿಗ್ಗೆ ತನ್ನ ಮನೆಯಿಂದ ಹೊರ ಬಂದ ರಾಜು ಅವರ ಮೇಲೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿ ದಿಢೀರನೇ ದಾಳಿ ನಡೆಸಿ, ತಲೆ ಹಾಗೂ ಕುತ್ತಿಗೆ ಭಾಗವನ್ನು ತೀವ್ರವಾಗಿ ಗಾಯಗೊಳಿಸಿದೆ. ಇದರಿಂದ ರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಗೋಪಾಲ್ ಮತ್ತು ಹುಲಿ ಕಾರ್ಯಾಚರಣೆ ಪಡೆಯ ಸಿಬ್ಬಂದಿ ತೆರಳಿದ್ದಾರೆ. ರಾಜು ಅವರನ್ನು ಕೊಂದ ಹುಲಿ ಕಾಫಿ ತೋಟದಲ್ಲಿ ಅಡಗಿರುವುದು ಗೋಚರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆ ಹಿಡಿಯಲು ಸಿದ್ದತೆ ನಡೆಸಿದ್ದಾರೆ.

ಭಾನುವಾರ ಸಂಜೆ ಹುಲಿ ದಾಳಿಗೆ ಚೇತನ್ (18) ಎಂಬುವವರು ಬಲಿಯಾದ ಅನತಿ ದೂರದಲ್ಲಿಯೇ ಈ ಘಟನೆ ನಡೆದಿದೆ.

ಮನುಷ್ಯರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಹುಲಿ ಕಾಫಿ ತೋಟದಲ್ಲಿಯೇ ಸುಳಿದಾಡುತ್ತಿರುವುದು ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯರ ಪ್ರತಿಭಟನೆ ಎಚ್ಚರಿಕೆ: ದಕ್ಷಿಣ ಕೊಡಗಿನಲ್ಲಿ 5 ವರ್ಷಗಳಿಂದ ನಿರಂತರವಾಗಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತಿದ್ದ ಹುಲಿಗಳು ಇದೀಗ ಮನುಷ್ಯರ ಮೇಲೆ ದಾಳಿ ನಡೆಸತೊಡಗಿವೆ. ಜಾನುವಾರುಗಳು ಖಾಲಿಯಾಗಿ ಅವುಗಳು ಸಿಗದೆ ಇರುವುದರಿಂದ ಮನುಷ್ಯರನ್ನು ಬಲಿ ತೆಗೆದುಕೊಳ್ಳಲಾರಂಭಿಸಿವೆ. ಇವುಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.