ಮನೆ ಭಾವನಾತ್ಮಕ ಲೇಖನ ಮಕ್ಕಳ ಮನಸ್ಥಿತಿ ಅರಿಯಬೇಕು

ಮಕ್ಕಳ ಮನಸ್ಥಿತಿ ಅರಿಯಬೇಕು

0

ಅಯ್ಯೋ ನೀವೇ ನನ್ನ ತಂದೆತಾಯಿಯರೆಂದು ಈವರೆಗೆ ನನಗೇಕೆ ಗೊತ್ತಾಗಲಿಲ್ಲ? ಹಾಗೆಂದು ಕೃಷ್ಣ-ಭಾಮೆಯರ ಘಾತಕ್ಕೆ ನೆಲಕ್ಕೊರಗಿ ಹಲುಬುತ್ತಾನೆ ನರಕಾಸುರ. ‘ನಿಮ್ಮ ಮಗನಾಗಿಯೂ ನಾನೇಕೆ ಹೀಗಾದೆ? ಬದುಕನ್ನೆಲ್ಲಾನಾನೇಕೆ ದುಷ್ಕೃತ್ಯದಲ್ಲೇ ಕಳೆದುಬಿಟ್ಟೆ?’ ಅವನು ಪಶ್ಚಾತ್ತಾಪದಲ್ಲಿಬೇಯುತ್ತಾನೆ. ವಿಷ್ಣು ವರಾಹಾವತಾರಿಯಾಗಿ ಬಂದು ಹಿರಣ್ಯಾಕ್ಷನನ್ನು ವಧಿಸಿದ ಬಳಿಕ ಭೂದೇವಿಯನ್ನು ಕೂಡಿದ್ದರಿಂದ ಹುಟ್ಟಿದವನು ಈ ನರಕಾಸುರ. ತಂದೆತಾಯಿಯರು ಜತೆಯಾಗಿ ಎದುರಿಸಿದಾಗ ಮಾತ್ರವೇ ತನಗೆ ಮರಣ ಎಂಬಂ ಬ್ರಹ್ಮನ ವರಬಲ ಅವನಿಗಿತ್ತು. ಸತ್ಯಭಾಮೆಯು ಭೂದೇವಿಯ ಅಂಶದಿಂದ ಕೂಡಿದವಳಾದ್ದರಿಂದ ಆಕೆಯೂ ಕೃಷ್ಣನೂ ಜತೆಯಾಗಿ ಹೋರಾಡಿ ದುಷ್ಟತನದಿಂದ ಮೆರೆಯುತ್ತಿದ್ದ ನರಕನನ್ನು ವಧಿಸಬೇಕಾಯಿತು.

ಬೆಳೆಯುವ ವಾತಾವರಣ ಮುಖ್ಯ

‘ನೀನು ನಡೆದ ಹಾದಿ ನಿನಗೆ ಮುಳುವಾಯಿತು’ ಹಾಗೆನ್ನುತ್ತಲೇ ನರಕಾಸುರನ ಒಳಗೆ ಬೆಳಕನ್ನು ಹಚ್ಚುತ್ತಾನೆ ಕೃಷ್ಣ. ‘ಬೀಜವನ್ನು ಎಲ್ಲಿಬಿತ್ತಲಾಗುತ್ತದೆ ಎಂಬುದಷ್ಟೇ ಮುಖ್ಯವಲ್ಲ. ಅದು ಹೇಗೆ ಬೆಳೆಯುತ್ತದೆ ಎಂಬುದೂ ಮುಖ್ಯ’ ಎಂಬುದು ಆತನ ಮಾತಿನ ಸಾರ. ಬೆಳೆ ಕಳೆಯಾಗಬಲ್ಲುದು, ಕಳೆ ಬೆಳೆಯಾಗಬಲ್ಲುದು. ಅದು ನಿರ್ಧಾರವಾಗುವುದು ಹುಟ್ಟಿದ ಮೊಳಕೆ ಯಾವ ಬಗೆಯ ಪೋಷಣೆ ಪಡೆಯುತ್ತದೆ ಎಂಬುದರ ಆಧಾರದಲ್ಲಿ. ನರಕಾಸುರ ಹುಟ್ಟಿದ್ದು ದೈವೀಶಕ್ತಿಯಿಂದಲೇ ಆದರೂ ಬೆಳೆದದ್ದು ರಕ್ಕಸ ಪರಿವಾರದಲ್ಲಿ.

ಇಲ್ಲಿಬೀಜ ಅಥವಾ ಮೊಳಕೆಗಿಂತಲೂ ಬಿತ್ತುವವನ ಅಥವಾ ಬೆಳೆಯುವವನ ಜವಾಬ್ದಾರಿಯೂ ದೊಡ್ಡದೆಂಬ ಧ್ವನಿಯೂ ಇದೆ. ‘ಹೆತ್ತವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಹೋದರೆ ಮಕ್ಕಳ ಪತನವನ್ನೂ ನೋಡಬೇಕಾಗುತ್ತದೆ’ ಎಂಬ ಆತ್ಮಾವಲೋಕನದ ವಿಷಾದವೂ ಇದೆ.

ಬರೀ ತೊಂಬತ್ತು ಅಂಕ ತೆಗೆದುಕೊಂಡಿದ್ದೀಯಾ, ಇನ್ನೂ ಹೆಚ್ಚು ಯಾಕೆ ತೆಗೆದುಕೊಂಡಿಲ್ಲಎಂದು ಅಪ್ಪ-ಅಮ್ಮ ಮಗನಲ್ಲಿಎರಡು ದಿನ ಮಾತು ಬಿಟ್ಟರಂತೆ; ಮೂರನೆಯ ದಿನ ಮಗ ನೇಣುಹಾಕಿಕೊಂಡು ಪ್ರಾಣಬಿಟ್ಟನಂತೆ. ಹೊಸ ಮೊಬೈಲ್ ಕೊಡಿಸುವುದಿಲ್ಲಎಂದು ಅಮ್ಮ ಖಡಕ್ಕಾಗಿ ಹೇಳಿದಳಂತೆ; ಮರುದಿನ ಹನ್ನೆರಡು ವರ್ಷದ ಮಗಳು ಮನೆಬಿಟ್ಟು ಓಡಿಹೋದಳಂತೆ. ಚಟಹಿಡಿಯುವ ಗೇಮ್ ಆಡಬೇಡವೆಂದು ಅಪ್ಪ ಕಟ್ಟುನಿಟ್ಟು ಮಾಡಿದನಂತೆ; ಮಗ ಮಧ್ಯರಾತ್ರಿ ಎದ್ದು ಅಪ್ಪನನ್ನು ಉಸಿರುಗಟ್ಟಿಸಿ ಸಾಯಿಸಿಯೇಬಿಟ್ಟನಂತೆ. ಶಿಸ್ತು ಸಂಯಮದಿಂದ ಇರಿ ಎಂದು ವಿದ್ಯಾರ್ಥಿಗಳಿಗೆ ಅಧ್ಯಾಪಕನೊಬ್ಬ ಕೊಂಚ ಗಟ್ಟಿ ದನಿಯಲ್ಲೇ ಬುದ್ಧಿವಾದ ಹೇಳಿದನಂತೆ; ಶಿಷ್ಯೋತ್ತಮನೊಬ್ಬ ತರಗತಿಯಲ್ಲೇ ಗುರುವಿಗೆ ಕಪಾಳಮೋಕ್ಷ ಮಾಡಿದನಂತೆ.

ಯಾಕೆ ಹೀಗಾಗುತ್ತಿದೆ? ಮಕ್ಕಳು ಯಾಕೆ ದೊಡ್ಡವರ ಮಾತನ್ನು ಕೇಳುತ್ತಿಲ್ಲ?

‘ಹುಟ್ಟುವ ಪ್ರತಿಯೊಂದು ಮಗುವೂ ಮನುಷ್ಯನ ಮೇಲೆ ತಾನಿನ್ನೂ ಮುನಿದಿಲ್ಲಎಂಬ ದೇವರ ಸಂದೇಶವನ್ನು ಭೂಮಿಗೆ ತರುತ್ತದೆ’ ಎನ್ನುತ್ತಾರೆ ಕವಿಗುರು ರವೀಂದ್ರನಾಥ ಠಾಕೂರ್. ಜಗತ್ತನ್ನು ಮುನ್ನಡೆಸುವ ಶಕ್ತಿಯ ಪ್ರತಿನಿಧಿಗಳಾಗಿ ಮಕ್ಕಳು ಹುಟ್ಟುತ್ತಾರೆ ಎಂದೂ ಆ ಮಾತನ್ನು ಅರ್ಥ ಮಾಡಿಕೊಳ್ಳಬಹುದಲ್ಲ? ಅಂದರೆ ಪ್ರತೀ ಮಗುವೂ ಮೂಲತಃ ದೈವಾಂಶಸಂಭೂತವೇ. ಮಕ್ಕಳನ್ನು ದೇವರೆಂದು ಕರೆಯುವುದೂ ಇದೇ ಕಾರಣಕ್ಕೆ ಅಲ್ಲವೇ? ‘ಚೈಲ್ಡ್ ಈಸ್ ದಿ ಫಾದರ್ ಆಫ್ ದಿ ಮ್ಯಾನ್’ ಎಂಬ ವರ್ಡ್ಸ್ವರ್ತನ ಸಾಲಿನಲ್ಲೂಇದೇ ಧ್ವನಿ ಇದೆ. ಅಂತಹ ಮಗು ಬೆಳೆಬೆಳೆಯುತ್ತಾ ನಾವೀಗ ಆತಂಕಪಡುತ್ತಿರುವ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ ಎಂದರೆ ಅದಕ್ಕೆ ಹೊಣೆಗಾರರು ಯಾರು?

ನೋಡಿ ಮಾಡುವ ವಯಸ್ಸು

ಮಕ್ಕಳು ನಾವು ಹೇಳಿದ್ದನ್ನು ಕೇಳಲಾರರೇನೋ? ಆದರೆ ಮಾಡಿದ್ದನ್ನು ಮಾಡುತ್ತಾರೆ. ಯಾಕೆಂದರೆ ಮಕ್ಕಳದ್ದು ಕೇಳಿ ಕಲಿಯುವ ವಯಸ್ಸಲ್ಲ, ನೋಡಿ ಮಾಡುವ ವಯಸ್ಸು. ದೊಡ್ಡವರ ಒಣ ರಾಜಕೀಯ, ವಿನಾ ಪ್ರತಿಷ್ಠೆ, ಕ್ಲುಲ್ಲಕ ವೈಮನಸ್ಸು, ಅನಗತ್ಯ ದುರಹಂಕಾರ- ಎಲ್ಲವನ್ನೂ ಎಳೆಯ ಮಕ್ಕಳು ತಮಗೂ ಗೊತ್ತಿಲ್ಲದೆ ಅನುಸರಿಸುತ್ತಿರುತ್ತಾರೆ. ಅವರಿಗೆ ಅಪ್ಪ-ಅಮ್ಮಂದಿರಿಗಿಂತ, ಅವರಿಗಿಂತಲೂ ಹೆಚ್ಚು ಸಮಯ ಜತೆಯಲ್ಲಿಕಳೆಯುವ ಅಧ್ಯಾಪಕರುಗಳಿಗಿಂತ ದೊಡ್ಡ ಮಾದರಿಗಳಿಲ್ಲ. ಅವರು ತಮ್ಮ ನಡೆನುಡಿಗಳಲ್ಲಿತೋರಲಾಗದ್ದನ್ನು ಮಕ್ಕಳ ವರ್ತನೆಗಳಲ್ಲಿನಿರೀಕ್ಷಿಸುವುದರಲ್ಲಿಯಾವ ಅರ್ಥವೂ ಇಲ್ಲ.

ನಾವೆಲ್ಲಮಕ್ಕಳ ಐಕ್ಯೂ ಹಿಂದೆ ಬಿದ್ದುಬಿಟ್ಟಿದ್ದೇವೆ. ಅದನ್ನೇ ಬುದ್ಧಿವಂತಿಕೆಯೆಂದೂ, ಅದೇ ಬದುಕಿನ ಯಶಸ್ಸಿನ ಮಾನದಂಡವೆಂದೂ ತಪ್ಪು ತಿಳಿದುಕೊಂಡಿದ್ದೇವೆ. ಐಕ್ಯೂವಿನಷ್ಟೇ ಸಮಾನವಾದ ಇಕ್ಯೂ (ಇಮೋಶನಲ್ ಕೋಶೆಂಟ್)ವನ್ನು ಅವರಲ್ಲಿಬೆಳೆಸುವುದರಲ್ಲಿವಿಫಲರಾಗಿದ್ದೇವೆ. ಅವರಲ್ಲಿಪ್ರೀತಿ, ಗೌರವ, ಸಹನೆ, ಕರುಣೆ, ಅನುಕಂಪ, ಸಹಾನುಭೂತಿ ಇನ್ನಿತ್ಯಾದಿ ಭಾವ ವೈವಿಧ್ಯತೆಗಳ ಮರುಪೂರಣದ ಅಗತ್ಯ ತುಂಬ ಇದೆ. ದಿನದ ಇಪ್ಪತ್ನಾಲ್ಕು ಗಂಟೆಗಳನ್ನೂ ಮೊಬೈಲ್ ಉಪಾಸನೆ, ಸೀರಿಯಲ್ ಮಹಾಪೂಜೆಗಳಲ್ಲಿತಲ್ಲೀನರಾಗಿರುವ ಮನೆಮಂದಿಗೆ ಅದಕ್ಕಿಂತ ಭಿನ್ನವಾದ ಪ್ರಸಾದ ದೊರೆಯುವುದಾದರೂ ಹೇಗೆ?

ಅದಕ್ಕಿಂತಲೂ ದೊಡ್ಡದು ಸ್ಪಿರಿಚುಯಲ್ ಕೋಶೆಂಟ್ ಅದು ಈ ಕಾಲದ ದೊಡ್ಡ ಅನಿವಾರ್ಯತೆ. ಮಕ್ಕಳಿಗೆ ಪುರಾಣದ, ಪಂಚತಂತ್ರದ ಕಥೆಗಳನ್ನು ಹೇಳಿ. ರಾಮಾಯಣ ಮಹಾಭಾರತ ಭಾಗವತಗಳನ್ನು ಸರಳವಾಗಿ ಪರಿಚಯಿಸಿ. ಸಂಗೀತ, ಕಲೆಗಳಲ್ಲಿಆಸಕ್ತಿ ಕುದುರುವಂತೆ ಮಾಡಿ. ಅವರೇನು ಮಹಾದೈವಭಕ್ತರಾಗಿ ಬೆಳೆಯಬೇಕಾಗಿಲ್ಲ, ಕನಿಷ್ಟ ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದಾಗುತ್ತದೆ, ಕೆಟ್ಟದ್ದನ್ನು ಶಿಕ್ಷಿಸುವ ಶಕ್ತಿಯೊಂದು ನಮ್ಮ ಬೆನ್ನಹಿಂದೆ ಸದಾ ಇದೆ ಎಂಬ ಭಾವನೆಯನ್ನಾದರೂ ಬೆಳೆಸಿ. ಗೆಲ್ಲುವುದರೊಂದಿಗೆ ಸೋಲುವುದನ್ನೂ ಕಲಿಸಿ. ಸಣ್ಣಪುಟ್ಟ ಸೋಲುಗಳನ್ನು ದೊಡ್ಡದು ಮಾಡಲು ಹೋಗಬೇಡಿ. ಅವೆಲ್ಲಸಾಮಾನ್ಯ ಎಂಬ ಭಾವನೆಯನ್ನು ಬೆಳೆಸಿ. ಆಗ ಬದುಕಿನ ದೊಡ್ಡ ಸವಾಲುಗಳನ್ನು ಎದುರಿಸಲು ಮಗುವಿನ ಮನಸ್ಸು ಸಹಜವಾಗಿಯೇ ಸಿದ್ಧವಾಗುತ್ತದೆ.