ಮನೆ ಕಾನೂನು ಜಾಮೀನು ಪ್ರಕರಣ ನಿರ್ಧರಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆ ‘ಚಾಟ್ ಜಿಪಿಟಿ’ ತಂತ್ರಜ್ಞಾನ ಬಳಸಿದ ಪಂಜಾಬ್ ಹೈಕೋರ್ಟ್

ಜಾಮೀನು ಪ್ರಕರಣ ನಿರ್ಧರಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆ ‘ಚಾಟ್ ಜಿಪಿಟಿ’ ತಂತ್ರಜ್ಞಾನ ಬಳಸಿದ ಪಂಜಾಬ್ ಹೈಕೋರ್ಟ್

0

ಜಾಮೀನು ಪ್ರಕರಣವೊಂದನ್ನು ನಿರ್ಧರಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆ ಕಂಪೆನಿ ಓಪನ್ಎಐ ಅಭಿವೃದ್ಧಿಪಡಿಸಿರುವ ಚಾಟ್ಜಿಪಿಟಿ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ಬಳಸಿದೆ.

ಕ್ರೌರ್ಯವನ್ನು ಒಳಗೊಂಡಿರುವ ದಾಳಿಗೆ ಸಂಬಂಧಿಸಿದ ಜಾಮೀನು ನ್ಯಾಯಶಾಸ್ತ್ರದ ವಿಶಾಲ ಚಿತ್ರಣ ಪಡೆಯುವುದಕ್ಕಾಗಿ ನ್ಯಾ. ಅನೂಪ್ ಚಿತ್ಕಾರ ಅವರು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಬಳಸಿದರು.

ಚಾಟ್ ಜಿಪಿಟಿಗೆ “ದಾಳಿಕೋರರರು ಕ್ರೌರ್ಯದಿಂದ ಹಲ್ಲೆ ನಡೆಸಿದಾಗ ಜಾಮೀನು ಕುರಿತಾದ ನ್ಯಾಯಶಾಸ್ತ್ರ ಏನು ಹೇಳುತ್ತದೆ?” ಎಂದು ನ್ಯಾಯಾಲಯ ಪ್ರಶ್ನೆ ಕೇಳಿತು.

ಆಗ ಕೃತಕ ಬುದ್ಧಿಮತ್ತೆ ಸಾಧನ ಹೀಗೆ ಉತ್ತರಿಸಿತು: ದಾಳಿಕೋರರು ಕ್ರೌರ್ಯದಿಂದ ಹಲ್ಲೆ ನಡೆಸಿದ ಪ್ರಕರಣಗಳಿಗೆ ಜಾಮೀನಿನ ಮೇಲಿನ ನ್ಯಾಯಶಾಸ್ತ್ರವು ಪ್ರಕರಣದ ನಿರ್ದಿಷ್ಟ ಸಂದರ್ಭಗಳು ಮತ್ತು ಪ್ರಕರಣದ ವಿಚಾರಣೆ ನಡೆಯುತ್ತಿರುವ ನ್ಯಾಯವ್ಯಾಪ್ತಿಯ ಕಾನೂನುಗಳು ಮತ್ತು ನಿಯಮಾವಳಿಗಳನ್ನು ಅವಲಂಬಿಸಿರುತ್ತದೆ. ಆದರೂ, ಸಾಮಾನ್ಯವಾಗಿ, ದಾಳಿಕೋರರ ಮೇಲೆ ಕ್ರೌರ್ಯವನ್ನು ಒಳಗೊಂಡಿರುವ ಹಿಂಸಾತ್ಮಕ ಅಪರಾಧ, ಉದಾಹರಣೆಗೆ ಕೊಲೆ, ಆಕ್ರಮಣಕಾರಿ ದಾಳಿ, ಅಥವಾ ಚಿತ್ರಹಿಂಸೆ ಕುರಿತು ಆರೋಪ ಹೊರಿಸಿದ್ದರೆ ಸಮುದಾಯಕ್ಕೆ ಅಪಾಯ ಇದೆ ಮತ್ತು ಕಾನೂನು ಕುಣಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಪರಿಗಣಿಸಬಹುದು. ಅಂತಹ ಸಂದರ್ಭಗಳಲ್ಲಿ, ನ್ಯಾಯಾಧೀಶರು ಜಾಮೀನು ನೀಡಲು ಅಷ್ಟೇನೂ ಒಲವು ತೋರದೆ ಇರಬಹುದು ಅಥವಾ ಪ್ರತಿವಾದಿಯು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅತಿ ಹೆಚ್ಚು ಜಾಮೀನು ಮೊತ್ತವನ್ನು ವಿಧಿಸಬಹುದು. ದಾಳಿಯ ತೀವ್ರತೆ, ಪ್ರತಿವಾದಿಯ ಕ್ರಿಮಿನಲ್ ಇತಿಹಾಸ ಹಾಗೂ ಆತನ ವಿರುದ್ಧದ ಸಾಕ್ಷ್ಯಗಳ ಬಲದಂತಹ ಅಂಶಗಳನ್ನು ಜಾಮೀನು ಪ್ರಕರಣ ನಿರ್ಧರಿಸುವಾಗ ನ್ಯಾಯಾಧೀಶರು ಪರಿಗಣಿಸಬಹುದಾಗಿದೆ, ನಿರಪರಾಧಿ ಎಂಬ ಪೂರ್ವಕಲ್ಪನೆಯು ನ್ಯಾಯ ವ್ಯವಸ್ಥೆಯ ಮೂಲಭೂತ ತತ್ವವಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ ಮತ್ತು ಬಲವಾದ ಕಾರಣಗಳಿಲ್ಲದ ಹೊರತು ಎಲ್ಲಾ ಆರೋಪಿಗಳು ಜಾಮೀನಿಗೆ ಅರ್ಹರಾಗಿರುತ್ತಾರೆ ಎನ್ನಬಹುದು. ಆದ್ದರಿಂದ, ಆಕ್ರಮಣಕಾರರು ಕ್ರೌರ್ಯದಿಂದ ಹಲ್ಲೆ ನಡೆಸಿದ ಪ್ರಕರಣಗಳಲ್ಲಿ ಕೂಡ, ಅವರು ಸಮುದಾಯಕ್ಕೆ ಅಪಾಯವನ್ನು ಉಂಟುಮಾಡುವುದಿಲ್ಲ ಅಥವಾ ಕಾನೂನಿನ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಧೀಶರು ನಿರ್ಧಾರಕ್ಕೆ ಬಂದರೆ ಅವರಿಗೆ ಜಾಮೀನು ನೀಡಬಹುದು.

ಚಾಟ್ ಜಿಪಿಟಿಯ ಉಲ್ಲೇಖವು ಪ್ರಕರಣದ ಅರ್ಹತೆಗೆ ಸಂಬಂಧಿಸಿದ ಅಭಿವ್ಯಕ್ತಿಯಲ್ಲ ಎಂದು ಸಹ ನ್ಯಾಯಾಲಯವು ಇದೇ ವೇಳೆ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

“ಚಾಟ್ ಜಿಪಿಟಿಯ ಯಾವುದೇ ಉಲ್ಲೇಖ ಮತ್ತು ಇಲ್ಲಿ ಮಾಡಲಾದ ಯಾವುದೇ ಅವಲೋಕನವು ಪ್ರಕರಣದ ಅರ್ಹತೆಯ ಬಗ್ಗೆ ಅಭಿಪ್ರಾಯದ ಅಭಿವ್ಯಕ್ತಿ ಆಗಿರುವುದಿಲ್ಲ, ಇಲ್ಲವೇ ಈ ಹೇಳಿಕೆಗಳ ಬಗ್ಗೆ ವಿಚಾರಣಾ ನ್ಯಾಯಾಲಯದ ಗಮನ ಸೆಳೆಯುವುದೂ ಆಗಿರುವುದಿಲ್ಲ. ಕ್ರೌರ್ಯವನ್ನು ಒಳಗೊಂಡಿರುವ ದಾಳಿಗೆ ಸಂಬಂಧಿಸಿದ ಜಾಮೀನು ನ್ಯಾಯಶಾಸ್ತ್ರದ ವಿಶಾಲ ಚಿತ್ರಣ  ಪಡೆಯುವುದಕ್ಕಾಗಿ ಇದನ್ನು ಬಳಸಲಾಗಿದೆ” ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ವಿಚಾರಣೆಯ ಕೊನೆಗೆ, ಸಹವರ್ತಿಯೊಬ್ಬನ ಮೇಲೆ ದಾಳಿ ನಡೆಸಿ ಆತನ ಸಾವಿಗೆ ಕಾರಣರಾದವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.