ಮನೆ ಅಪರಾಧ ಪ್ರಚೋದನಕಾರಿ ಭಾಷಣ: ನಟಿ ಶ್ರುತಿ ವಿರುದ್ಧ ಹಿರೆಕೇರೂರು ಠಾಣೆಯಲ್ಲಿ ದೂರು ದಾಖಲು

ಪ್ರಚೋದನಕಾರಿ ಭಾಷಣ: ನಟಿ ಶ್ರುತಿ ವಿರುದ್ಧ ಹಿರೆಕೇರೂರು ಠಾಣೆಯಲ್ಲಿ ದೂರು ದಾಖಲು

0

ಹಾವೇರಿ: ಬಿಜೆಪಿ ನಾಯಕಿ ಶ್ರುತಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಜೆಡಿಎಸ್ ಆರೋಪಿಸಿ ಏ.8 ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ನಟಿ ಶೃತಿ ವಿರುದ್ಧ ಕಲಂ 505(2) ರಡಿಯಲ್ಲಿ ಹಿರೆಕೇರೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Join Our Whatsapp Group

ಗುರುವಾರ (ಏ.6) ರಂದು ಹಿರೇಕೆರೂರು ಕ್ಷೇತ್ರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ನಟಿ ಶೃತಿ ಭಾಷಣದ ಭರಾಟೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಜೆಡಿಎಸ್ ಆರೋಪ ಮಾಡಿತ್ತು. ಅದರಂತೆ ನೋಡಲ್ ಅಧಿಕಾರಿ ಪಂಪಾಪತಿ ಎಂಬುವವರು ದೂರು ನೀಡಿದ್ದರು.

ಶೃತಿ ಹೇಳಿದ್ದೇನು ?

ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶಕ್ಕೆ ಮಾಜಿ ಸಚಿವ ಬಿ.ಸಿ ಪಾಟೀಲ್ ಪರ ಪ್ರಚಾರ ಮಾಡಲು ಶೃತಿಯವರು ಆಗಮಿಸಿದ್ದರು. ಈ ವೇಳೆ ಭಾಷಣ ಮಾಡಿದ್ದ ಅವರು ‘ಯಾವುದೇ ಬೇರೆ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಆದರೆ ಒಂದೆ ಮಾತಿನಲ್ಲಿ ಹೇಳಿ ಮುಗಿಸಿಬಿಡುತ್ತೇನೆ ‘ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ದಿ ಆಗಬೇಕಾದ್ರೆ ಜೆಡಿಎಸ್ ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಿ. ಭಾರತದಲ್ಲಿ ಭಾರತೀಯರ ವಂಶ ಅಭಿವೃದ್ಧಿ ಆಗಬೇಕಾದರೆ ಭಾರತೀಯ ಜನತಾ ಪಾರ್ಟಿಗೆ ಮತ ಹಾಕಿ ಎಂದಿದ್ದರು.

ಇದೇ ಹೇಳಿಕೆ ಸಂಬಂಧ ಇದೀಗ ನಟಿ ಶೃತಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಲಂ 505(2) ರಡಿ ಹಿರೆಕೇರೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.