ಮನೆ ಆರೋಗ್ಯ ಊಟದ ಬಳಿಕ ಮೊಸರು ಸೇವಿಸುವುದರಿಂದಾಗುವ ಉಪಯೋಗ

ಊಟದ ಬಳಿಕ ಮೊಸರು ಸೇವಿಸುವುದರಿಂದಾಗುವ ಉಪಯೋಗ

0

ಹಾಲಿನ ಉಪ ಉತ್ಪನ್ನವಾದ ಮೊಸರಿನ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶ ಸತ್ವಗಳು ಹೇರಳವಾಗಿ ಕಂಡುಬರುವುದರಿಂದ, ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಇದರಿಂದ ನಿರೀಕ್ಷಿಸಬಹುದಾಗಿದೆ. ವಿಶೇಷವಾಗಿ ಇದರಲ್ಲಿ ಅಧಿಕ ಪ್ರಮಾಣದ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಅಂಶಗಳು ಕೂಡ ಕಂಡು ಬರುವುದರಿಂದ, ಸಾಧ್ಯವಾದರೆ ಮಧ್ಯಾಹ್ನದ ಊಟದ ಬಳಿಕ ಒಂದು ಕಪ್ ಮೊಸರು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಕೆಲವೊಮ್ಮೆ ತುಂಬಾನೇ ಖಾರವಾದ ಅಂದರೆ ಜಾಸ್ತಿ ಮಸಾಲೆಯುಕ್ತ ಆಹಾರ ಸೇವನೆ ಮಾಡಿದ ವೇಳೆ, ಅದರಲ್ಲೂ ಕೆಲವೊಂದು ಮಸಾಲೆಯುಕ್ತ ನಾನ್ ವೆಜ್ ಆಹಾರ ಪದಾರ್ಥಗಳನ್ನು ಸೇವಿಸಿದ ಬಳಿಕ ಅಥವಾ ಊಟ ಮಾಡಿದ ಕೂಡಲೇ ಮಲಗಿದ ವೇಳೆ ಎದೆಯುರಿ ಸಮಸ್ಯೆ ಕಂಡು ಬರಲು ಶುರುವಾಗುತ್ತದೆ. ಇನ್ನು ಕೆಲವರಿಗೆ ಇದರಿಂದಾಗಿ ಹೊಟ್ಟೆಯಲ್ಲಿ ಉರಿ ಕೂಡ ಶುರುವಾಗುತ್ತದೆ.

ಇನ್ನು ಇದಕ್ಕೆ ಪರಿಹಾರವಾಗಿ ಎಷ್ಟು ಲೋಟ ನೀರು ಕುಡಿದರೂ ಕೂಡ ಇದರಿಂದ ಹೊರಬರಲು ಸಾಧ್ಯವಾಗುವುದೇ ಇಲ್ಲ! ಒಂದು ವೇಳೆ ಇಂತಹ ಸಂದರ್ಭ ನಿಮಗೂ ಉಂಟಾಗುತ್ತಿದ್ದರೆ, ಊಟದ ಬಳಿಕ ಒಂದು ಕಪ್ ಮೊಸರನ್ನು ಸೇವಿಸಿ, ಇಲ್ಲಾಂದರೆ ಊಟದ ಜೊತೆಗೂ ಕೂಡ ಮೊಸರು ಸೇರಿಸಿ ಸೇವನೆ ಮಾಡಬಹುದು

ನಮಗೆಲ್ಲರಿಗೂ ಗೊತ್ತೇ ಇರುವ ಹಾಗೆ, ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣ ಆಗುತ್ತಾ ಹೋದರೆ, ನಮ್ಮ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಅಲ್ಲದೇ ಅಜೀರ್ಣದಿಂದ ಕಾಡುವ ಕೆಲವೊಂದು ಸಮಸ್ಯೆಗಳಿಂದ ಕೂಡ ದೂರವಿರಲು ಸಹಾಯವಾಗುತ್ತದೆ. ಮುಖ್ಯವಾಗಿ ಮಲಬದ್ಧತೆಯಂತಹ ಸಮಸ್ಯೆಗಳಿಂದ ದೂರವಿರಬಹುದು.

ಹೀಗಾಗಿ ಜೀರ್ಣಶಕ್ತಿ ಸರಿಯಾಗ ನಡೆಯಬೇಕೆಂದರೆ, ನಮ್ಮ ದೈನಂದಿನ ಜೀವನಶೈಲಿಯ ಜೊತೆಗೆ ಸರಿಯಾದ ಆಹಾರಕ್ರಮವನ್ನು ಕೂಡ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ನಿಯಮಿತವಾಗಿ ಮೊಸರನ್ನು ಸೇವಿಸುವುದರಿಂದ ತುಂಬಾನೇ ಲಾಭಗಳಿವೆ.

ಇದಕ್ಕೆ ಕಾರಣಗಳನ್ನು ನೋಡುವುದಾದರೆ, ಮೊಸರಿನಲ್ಲಿ ವಿಟಮಿನ್ ಬಿ12 ಅಂಶ ಅಧಿಕ ಪ್ರಮಾಣದಲ್ಲಿ ಕಂಡುಬರುವುದರ ಜೊತೆಗೆ, ದೇಹದ ಆಂತರಿಕ ಭಾಗದಲ್ಲಿ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಮಾಡುವಲ್ಲಿ ಇದು ತುಂಬಾನೇ ಸಹಕಾರಿ. ಹಾಗಾಗಿ ಪ್ರತಿ ದಿನ ನಿಯಮಿತವಾಗಿ ಮೊಸರು ಸೇವನೆ ಮಾಡುವುದು ಅತ್ಯಂತ ಆರೋಗ್ಯಕರವಾದ ಒಂದು ಅಭ್ಯಾಸ ಎಂದು ಹೇಳಬಹುದು.

ಸಾಮಾನ್ಯವಾಗಿ ಆಸಿಡಿಟಿ ಸಮಸ್ಯೆಗೆ ಕಾರಣಗಳನ್ನು ನೋಡುವುದಾದರೆ, ಅನಾರೋಗ್ಯಕಾರಿ ಆಹಾರ ಸೇವನೆ, ಒತ್ತಡದ ಜೀವನಶೈಲಿ, ಅತಿಯಾದ ಎಣ್ಣೆಯುಕ್ತ ಮಸಾಲೆ ಪದಾರ್ಥಗಳು, ಹೊರಗಿನ ಆಹಾರ ಸೇವನೆ, ಅಥವಾ ಮಸಾಲೆ ಪದಾರ್ಥಗಳ ಸೇವನೆ ಇತ್ಯಾದಿಗಳು ಕಾರಣವಾಗಿದೆ.

ಈ ಸಮಸ್ಯೆ ಕಂಡುಬಂದಾಗ ಸಾಮಾನ್ಯವಾಗಿ, ಊಟ ಮಾಡುವುದಕ್ಕೆ ಆಗುವುದಿಲ್ಲ, ಪದೇ ಪದೇ ಹುಳಿ ತೇಗು ಬರುತ್ತಲೇ ಇರುವುದು, ಈ ಕಾಯಿಲೆಯ ಲಕ್ಷಣಗಳು. ಕೆಲವರಿಗೆ ಈ ಸಮಸ್ಯೆ ಒಂದೆರೆಡು ದಿನಗಳಲ್ಲಿ ಕಮ್ಮಿ ಆದರೆ, ಇನ್ನು ಕೆಲವರಿಗೆ ದೀರ್ಘ ಕಾಲದವರೆಗೂ ಕಾಡುತ್ತಲೇ ಇರುತ್ತದೆ. ಆದರೆ ನೆನಪಿಡಿ, ಒಂದು ವೇಳೆ ಇದು ಅತಿಯಾಗಿ ಕಾಡುತ್ತಲಿದ್ದರೆ, ಆಗ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ.

ಆಸಿಡಿಟಿ ಸಮಸ್ಯೆ ಇರುವವರು, ಮಧ್ಯಾಹ್ನ ಊಟ ಮಾಡಿದ ನಂತರ ಮತ್ತು ರಾತ್ರಿ ಊಟ ಮಾಡಿದ ನಂತರ ಒಂದು ಸಣ್ಣ ಕಪ್ ಮೊಸರು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು

ಇಂದಿನ ಆಧುನಿಕ ಕಾಲಘಟ್ಟದಲ್ಲಿ, ನಾವು ಸೇವಿಸುವ ಯಾವುದೇ ಆಹಾರ ಪದಾರ್ಥವಾಗಿರಲಿ ಅವು ಆರೋಗ್ಯಕಾರಿ ಎಂದು ಹೇಳಲು ಬರುವುದಿಲ್ಲ! ಯಾಕೆಂದರೆ ಇಂದಿನ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಆಹಾರ ಪದಾರ್ಥಗಳು ಕೂಡ ಕಲಬೆರೆಕೆಗಳಿಂದ ಕೂಡದ್ದು, ಇದರಿಂದ ಮನುಷ್ಯನ ಆರೋಗ್ಯಕ್ಕೆ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಮೊಸರು ಕೂಡ ಹೊರತಲ್ಲ! ಹೀಗಾಗಿ ಇವೆಲ್ಲಾ ಸಮಸ್ಯೆಗಳಿಂದ ದೂರವಿರಬೇಕೆಂದರೆ, ಹಾಲು ತಂದು ಮನೆಯಲ್ಲಿಯೇ ಹೆಪ್ಪು ಹಾಕಿ ತಯಾರು ಮಾಡುವ ಮೊಸರಿನ ಸೇವನೆ ಮಾಡಿದರೆ ಆರೋಗ್ಯಕ್ಕ ಬಹಳ ಒಳ್ಳೆಯದು.

ವಿಷ್ಯಗಳು ನಿಮಗೆ ಗೊತ್ತಿರಲಿ

ಒಂದು ವೇಳೆ ನಿಮಗೆ ಶೀತ ಮತ್ತು ಕೆಮ್ಮಿನ ಸಮಸ್ಯೆಗಳಿದ್ದರೆ ಮೊಸರು ಸೇವಿಸಬೇಡಿ

ರಾತ್ರಿ ವೇಳೆ ಸಕ್ಕರೆ ಬೆರೆಸಿ ಮೊಸರು ತಿನ್ನಲೇಬಾರದು

ಸಕ್ಕರೆ ಕಾಯಿಲೆ ಇರುವವರು ಸಕ್ಕರೆ ಬೆರೆಸಿ ಮೊಸರು ಸೇವಿಸಬಾರದು

ತೂಕ ಇಳಿಸಲು ಬಯಸುತ್ತಿದ್ದರೆ, ಪ್ಲೇನ್ ಮೊಸರು ಸೇವಿಸಿದರೆ ಒಳ್ಳೆಯದು