ಜಮ್ಮು (jammu)-ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಮ್ಮು-ಕಾಶ್ಮೀರಕ್ಕೆ (Jammu-Kashmir) ಭೇಟಿ ನೀಡುವ ಸಂದರ್ಭದಲ್ಲಿ ಆತ್ಮಾಹತ್ಯಾ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂದು ಇಲ್ಲಿನ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ನಲ್ಲಿ ಹತರಾದ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರು ಆತ್ಮಹತ್ಯಾ ದಾಳಿಗೆ ಯೋಜಿಸಿದ್ದರು. ಪ್ರಧಾನಿ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಇನ್ನೆರಡು ದಿನಗಳಿದ್ದು ಈ ವೇಳೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂದು ಹೇಳಿದ್ದಾರೆ.
ಕಾರ್ಯಾಚರಣೆ ಮುಕ್ತಾಯಗೊಳಿಸಿದ ಬಳಿಕ ಮಾತನಾಡಿರುವ ಪೊಲೀಸ್ ಅಧಿಕಾರಿ, ಇಬ್ಬರು ಉಗ್ರರ ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಸಿಐಎಸ್ಎಫ್ ಸಹಾಯಕ ಇನ್ಸ್ಪೆಕ್ಟರ್ ಗಳು ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜಮ್ಮುವಿನ ಸೇನಾ ಕ್ಯಾಂಪ್ ನ ಹೊರಭಾಗದಲ್ಲಿ ಈ ಗುಂಡಿನ ಚಕಮಕಿ ನಡೆದಿತ್ತು. ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಗಳ ಪೈಕಿ 9 ಮಂದಿ ಗಾಯಗೊಂಡಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಹೊರಬಂದ ಮಾಹಿತಿಗಳ ಪ್ರಕಾರ ಭಯೋತ್ಪಾದಕರು ಸಾಂಬಾದ ಅಂತಾರಾಷ್ಟ್ರೀಯ ಗಡಿಯಿಂದ ಒಳನುಸುಳಿದ್ದು, ಜಮ್ಮುವಿನ ಹೊರಭಾಗಕ್ಕೆ ಪ್ರವೇಶಿಸಿ ಕ್ಯಾಂಪ್ ನ ಹತಿರದಲ್ಲೇ ವಾಸ್ತವ್ಯ ಹೂಡಿದ್ದರು.
ಕಳೆದ ರಾತ್ರಿಯಿಂದ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಹಾಗೂ ಇನ್ನಿತರ ಪಡೆಗಳೂ ತೊಡಗಿದ್ದವು. ಭಯೋತ್ಪಾದಕರು ಪ್ರಧಾನಿ ಭೇಟಿ ವೇಳೆ ವಿಧ್ವಂಸಕ ಕೃತ್ಯ ಎಸಗಲು ಯೋಜಿಸಿದ್ದರು. ಅಂತೆಯೇ ಆತ್ಮಹತ್ಯಾ ದಾಳಿಗೆ ಪೂರಕವಾಗುವ ಉಡುಪನ್ನು ಸೊಂಟಕ್ಕೆ ಧರಿಸಿದ್ದರು, ಭಯೋತ್ಪಾದಕರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.