ಮನೆ ಮಾನಸಿಕ ಆರೋಗ್ಯ ಬಾಣಂತಿ ಸನ್ನಿ

ಬಾಣಂತಿ ಸನ್ನಿ

0

ಹೆರಿಗೆಯಾದ ಒಂದು ವಾರದ ನಂತರ, ಕೆಲವು ಬಾಣಂತಿಯರಿಗೆ ಒಂದು ಬಗೆಯ ಮಾನಸಿಕ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅವರು ಮಂಕಾಗುತ್ತಾರೆ. ಸರಿಯಾಗಿ ನಿದ್ರೆಮಾಡುವುದಿಲ್ಲ. ಊಟ ಮಾಡುವುದಿಲ್ಲ.ಮಗುವನ್ನು ನೋಡಿಕೊಳ್ಳುವುದಿಲ್ಲ. ತಮ್ಮಷ್ಟಕ್ಕೆ ತಾವೇ ಮಾತಾಡಿಕೊಳ್ಳುವುದು. ವಿನಾಕಾರಣ  ಅಳಬಹುದು, ನಗಬಹುದು, ಕೋಪಿಸಿಕೊಳ್ಳಬಹುದು. ತನಗೆ ಏನೋ ಅಪಾಯ ಕಾದಿದೆ ತನ್ನನ್ನು ಯಾರೋ ಹೊಡೆಯುತ್ತಾರೆ. ಕೊಂದುಹಾಕುತ್ತಾರೆ ಎಂದು ಭಯಪಡುತ್ತಾರೆ. 

Join Our Whatsapp Group

ತನ್ನ ತಂದೆ ತಾಯಿ ಗಂಡ, ಅತ್ತೆ ಮಾವಂದಿರನ್ನು ಗುರುತಿಸದಿರಬಹುದು. ಕೋಣೆ ಬಿಟ್ಟು ಹೊರಗೆ ಹೊಗಲು ಪ್ರಯತ್ನಿಸಬಹುದು. ಬಾಯಿಗೆ ಬಂದಂತೆ ಮಾತಾಡುತ್ತಾ, ಇತರರನ್ನು  ಹೊಡೆಯಲು ಪ್ರಯತ್ನಿಸಬಹುದು “ಮಗು ನನ್ನದಲ್ಲ.ನನ್ನಮಗುವನ್ನು ಸಾಯಿಸಿಬಿಟ್ಟಿದ್ದಾರೆ”. ಎಂದು ಆರೋಪಿಸಬಹುದು. ಆತ್ಮಹತ್ಯೆಗೆ ಪ್ರಯತ್ನಪಡಬಹುದು ಈ ಕಾಯಿಲೆಗೆ ʼಪ್ಯುರೆಪೆರಲ್ ಸೈಕೋಸಿಸ್ʼ ಎಂದು ಕರೆಯುತ್ತಾರೆ. ಜನಸಾಮಾನ್ಯರು ಇದನ್ನು ʼಬಾಣಂತಿ ಸನ್ನಿʼ ಎಂದು ಕರೆಯುತ್ತಾರೆ. ಬಾಣಂತಿಗೆ ನಂಜಾಗಿದೆ. ತಣ್ಣೀರು ಮುಟ್ಟಿರಬೇಕು. ಗಾಳಿಗೆ ಮೈಯೊಡ್ಡಿರಬೇಕು. ಯಾರದೋ ಕೆಟ್ಟ ದೃಷ್ಟಿ ತಾಕಿದೆ. ಯಾವುದೋ ದೆವ್ವ ಪಿಶಾಚಿ ಮೆಟ್ಟಿಕೊಂಡಿದೆ. ಗ್ರಹಚಾರ ಎಂದು ನಂಬುತ್ತಾರೆ. ಪೂಜೆ, ಪುನಸ್ಕಾರ, ಭೂತೋಚ್ಛಾಟನೆಯಂತಹ ಸಾಂಪ್ರದಾಯಿಕ ಚಿಕಿತ್ಸೆ ಕೊಡುತ್ತಾರೆ. ಇದರಿಂದ ಉಪಯೋಗವಿಲ್ಲ. ಸುಮ್ಮನೆ ಹಣ ಶ್ರಮ ವ್ಯರ್ಥ. ರೋಗಿಗೂ ಹಿಂಸೆ.

ಈ ಬಾಣಂತಿಯ ಸನ್ನಿ, ಮಿದಿಳಿನ ಒಂದು ಕಾಯಿಲೆ. ಮಿದುಳಿನಲ್ಲಿಕೆಲವು ನರವಾಹಕ ರಾಸಾಯನಿಕ ಕಣಗಳು ಅಸ್ತವ್ಯಸ್ತಗೊಳ್ಳುತ್ತದೆ. ಈ ಕಾಯಿಲೆ ಬರಲು ಪ್ರೇರಣೆ ನೀಡುವ ಅನೇಕ ಅಂಶಗಳಿವೆ. ಗರ್ಭಾಧಾರಣೆ ಸ್ತ್ರಿಗೆ ಇಷ್ಟವಿಲ್ಲದಿರುವುದು, ಗರ್ಭಾಧಾರಣೆ ಅವಧಿಯಲ್ಲಿ ಆಕೆಯ ಆರೋಗ್ಯ ಸರಿ ಇಲ್ಲದಿರುವುದು, ಹೆರಿಗೆ ತುಂಬಾ ಕಷ್ಟವಾಗುವುದು, ಹೆರಿಗೆ ತುಂಬಾ ಕಷ್ಟವಾಗುವುದು, ಹೆರಿಗೆ ನಂತರ  ರಕ್ತಸ್ರಾವ ಹೆಚ್ಚಾಗುವುದು. ರಕ್ತಹೀನತೆ ಇರುವುದು, ಸೊಂಕಾಗುವುದು. ಹುಟ್ಟಿದ ಮಗು ಹೆಣ್ಣು ಎಂದೋ, ಅಂಗವೈಕಲ್ಯದಿಂದ ಕೂಡಿದೆ ಎಂದೋ ಉಂಟಾಗುವ ನಿರಾಶೆ, ದಾಂಪತ್ಯ ವಿರಸ, ಅತ್ತೆ ಸೊಸೆ ವೈಮನಸ್ಯಗಳು ಬಾಣಂತಿಸನ್ನಿ ಬರಲು ಕಾರಣವಾಗಬಹುದು.

ಬಾಣಂತಿ ಸನ್ನಿ ಚೊಚ್ಚಲ ಹೆರಿಗೆಯ ನಂತರ ಬರುವ ಸಾಧ್ಯತೆ ಹೆಚ್ಚು. ಈಗಾಗಲೇ ಮನೆಯಲ್ಲಿ ಮತ್ಯಾರಿಗೋ ಒಬ್ಬರಿಗೆ ಮಾನಸಿಕ ಕಾಯಿಲೆ ಇದ್ದರೆ, ಅನುವಂಶಿಕ ಕಾರಣದಿಂದಲೂ ಇದು ಕಾಣಿಸಿಕೊಳ್ಳಬಹುದು.

ಬಾಣಂತಿ ಸನ್ನಿ ಸಾಮಾನ್ಯವಾಗಿ ಮೂರು ನಾಲ್ಕು ವಾರಗಲ ಕಾಲ ಇರುತ್ತದೆ. ಚಿಕಿತ್ಸೆ ಕೊಡದಿದ್ದರೆ ಅದು ಮುಂದುವರೆದು ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆಯಾಗೂ ಪರಿವರ್ತನೆಗೊಳ್ಳಬಹುದು. ಚಿತ್ತವಿಕಲತೆ ನಿರೋಧಕ ಮಾತ್ರೆ, ಇಂಜಕ್ಷನ್ ಗಳನ್ನು ಕೊಡಬೇಕು.  ಕೆಲವು ಪ್ರಕರಣಗಳಲ್ಲಿ ತೀರಾ ಮಂಕಾಗಿರುವ ರೋಗಿಗಳಿಗೆ ವಿದ್ಯುತ್ ಕಂಪನ ಚಿಕಿತ್ಸೆಯು ಬೇಕಾಗಬಹುದು. ರೋಗಿಗಳಿಗೆ ಮನೆಯವರು ಪ್ರೀತಿಯಿಂದ ಅರೈಕೆ ಮಾಡಬೇಕು. ಮಗುವನ್ನು ನೀಡಿಕೊಳ್ಳಲು ಎದೆಹಾಲು ಕೊಡಲು ಪ್ರೋತ್ಸಾಹ ನೀಡಬೇಕು. ಅಕೆಯ ಬೇಕು ಬೇಡಗಳನ್ನು ಗಮನಿಸಿ, ಸಾಂತ್ವನ ಹೇಳಬೇಕು.

ಒಂದು ಹೆರಿಗೆಯ ನಂತರ ಕಾಣಿಸಿಕೊಂಡ ಬಾಣಂತಿಸನ್ನಿ ಮತ್ತೋಂದು ಹೆರಿಗೆಯ ನಂತರ ಕಾಣಿಸಿ ಕೊಳ್ಳಬಹುದು, ಕಾಣಿಸಿಕೊಳ್ಳದೆಯೂ ಇರಬಹುದು, ವೈದ್ಯರ ನಿರ್ದೇಶನದಲ್ಲಿ ಗರ್ಭಿಣಿ ಸ್ತ್ರೀ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಹೆರಿಗೆ ಸುಲಭವಾಗುವಂತೆ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಳ್ಳುವುದು, ವಿಷಮ ಪರಿಣಾಮಗಳಾದಾಗ ವ್ಯೆದ್ಯಕೀಯ ನೆರವನ್ನು ಪಡೆಯುವುದು, ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಿ ಕೊಳ್ಳುವುದರಿಂದ ಬಾಣಂತಿ ಸನ್ನಿ ಬರುವುದನ್ನು ತಡೆಗಟ್ಟಬಹುದು. ಈಗಾಗಲೇ ಒಂದೆರಡು ಮಕ್ಕಳಿದ್ದರೆ, ಮಕ್ಕಳಾಗದಂತೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಸಂಪೂರ್ಣವಾಗಿ ಸುರಕ್ಷಿತ.