ಮನೆ ಕಾನೂನು ಸುಶಿಕ್ಷಿತ, ದೈವಭಕ್ತನಾಗಿದ್ದ ಕಾರಣಕ್ಕೆ ಸಾಕ್ಷಿ ಒಳ್ಳೆಯವ ಎಂದು ನ್ಯಾಯಾಲಯಗಳು ಊಹಿಸಲಾಗದು: ಸುಪ್ರೀಂ

ಸುಶಿಕ್ಷಿತ, ದೈವಭಕ್ತನಾಗಿದ್ದ ಕಾರಣಕ್ಕೆ ಸಾಕ್ಷಿ ಒಳ್ಳೆಯವ ಎಂದು ನ್ಯಾಯಾಲಯಗಳು ಊಹಿಸಲಾಗದು: ಸುಪ್ರೀಂ

0

ಒಬ್ಬ ವ್ಯಕ್ತಿ ಸುಶಿಕ್ಷಿತ ಮತ್ತು ದೈವಭಕ್ತನಾಗಿದ್ದ ಮಾತ್ರಕ್ಕೆ ಆತ ಒಳ್ಳೆಯವನು ಎಂದು ನ್ಯಾಯಾಲಯಗಳು ಭಾವಿಸುವುದಿಲ್ಲ ಎಂದು ಈಚೆಗೆ ಕೊಲೆ ಪ್ರಕರಣದಲ್ಲಿ ವ್ಯಕ್ತಿಯ ಶಿಕ್ಷೆಯನ್ನು ರದ್ದುಗೊಳಿಸುವ ವೇಳೆ ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಾಲಯಗಳು ಇಂತಹ ಕಲ್ಪನೆಗಳ ಬಗ್ಗೆ ಅಭಿಪ್ರಾಯ ರೂಪಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿದೆ.

ಒಬ್ಬ ವ್ಯಕ್ತಿ ವಿದ್ಯಾವಂತ ಮತ್ತು ದೈವಭಕ್ತ ಎಂದ ಮಾತ್ರಕ್ಕೆ ಅದು ಧನಾತ್ಮಕ ವರ್ಚಸ್ಸನ್ನು ಸೃಷ್ಟಿಸುವುದಿಲ್ಲವಾದ್ದರಿಂದ ನ್ಯಾಯಾಲಯ ತನ್ನದೇ ಅಭಿಪ್ರಾಯದಲ್ಲಿ ಅಂತಹ ವ್ಯಕ್ತಿ ಒಳ್ಳೆಯವನು ಎಂದು ಘೋಷಿಸಲು ಸಾಧ್ಯವಿಲ್ಲ. ನ್ಯಾಯಾಲಯಗಳು ಅದರಲ್ಲಿಯೂ ಮೇಲ್ಮನವಿ ನ್ಯಾಯಾಲಯವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ವ್ಯಕ್ತಿಯ ಸಂಬಂಧಿತ ಸಂಗತಿಗಳು ಗಂಭೀರ ಅನುಮಾನ ಮೂಡಿಸುತ್ತಿದ್ದರೆ ಕೇವಲ ಆತನ ಹಿನ್ನೆಲೆಯಿಂದ ಆತ ಎಂತಹವನು ಎಂಬುದನ್ನು ನಿರ್ಧರಿಸುವುದು ಸಾಧ್ಯವಿಲ್ಲ ಎಂಬುದಾಗಿ ಅಕ್ಟೋಬರ್ 13 ರ ತೀರ್ಪಿನಲ್ಲಿ ಪೀಠ ಹೇಳಿದೆ.

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ “ಸಾಕ್ಷಿಯ ನಡವಳಿಕೆ” ಎಂಬುದು ಸಾಕ್ಷಿಯ ಖ್ಯಾತಿಯನ್ನು ನಿರ್ಧರಿಸುವುದಕ್ಕೆ ಸಂಬಂಧಿಸಿದೆ ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.

“ಸಾಮಾನ್ಯ ಮಾನವ ನಡೆಯ ದೃಷ್ಟಿಕೋನದಿಂದ ವ್ಯಕ್ತಿಯ ನಡವಳಿಕೆ ಅಸ್ವಾಭಾವಿಕ ಎನಿಸಿದಾಗ, ಒಳ್ಳೆಯತನ ಎಂಬುದು ಎರಡನೇ ಸ್ಥಾನ ಪಡೆಯುತ್ತದೆ” ಎಂದು ಅದು ಹೇಳಿದೆ.

ಕೊಲೆ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಾಸಿಕ್ಯೂಷನ್‌ ಸಾಕ್ಷಿ ವಿದ್ಯಾವಂತ ಮತ್ತು ದೇವರಿಗೆ ಭಯಪಡುವ ವ್ಯಕ್ತಿ ಎಂಬುದನ್ನು ಆಧರಿಸಿ ಹೈಕೋರ್ಟ್‌ ಈ ತೀರ್ಮಾನಕ್ಕೆ ಬಂದಿತ್ತು. ಈ ವಿಧಾನವನ್ನು ಟೀಕಿಸಿರುವ ಸುಪ್ರೀಂ ಕೋರ್ಟ್‌ ಚಾರಿತ್ರ್ಯಕ್ಕೂ ಒಳ್ಳೆಯತನಕ್ಕೂ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸಿತು. 

ಕೇವಲ ಸಾಂದರ್ಭಿಕ ಪುರಾವೆಗಳನ್ನು ಒಳಗೊಂಡಿರುವ ಪ್ರಕರಣದ ವಿಚಾರಣೆ ನಡೆಸುವಾಗ ಹೈಕೋರ್ಟ್‌ಈ ರೀತಿಯ ಧೋರಣೆ ತಾಳುವುದು ಸರಿಯಲ್ಲ. ಕೊಲೆ ಸಂಭವಿಸಿದ ನಂತರ ಹೈಕೋರ್ಟ್, ಸಾಕ್ಷಿಯ ಪುರಾವೆಗಳ ಮೇಲೆ ಕುರುಡಾಗಿ ಅವಲಂಬಿತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂತ್ರಸ್ತ ಸಾವನ್ನಪ್ಪಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂಬುದು ಆತನನ್ನು ಅಪರಾಧಿ ಎಂದು ನಿರ್ಧರಿಸುವ ಅಂಶವಾಗದು ಎಂದು ಕೂಡ ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ತೀರ್ಪನ್ನು ಬದಿಗೆ ಸರಿಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿತು. ಪ್ರಾಸಿಕ್ಯೂಷನ್‌ ತನ್ನ ಲೋಪವನ್ನು ಸಮಂಜಸ ಅನುಮಾನ ಮೀರಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ಅದು ಹೇಳಿದೆ.