ಶಿರಸಿ/ಗದಗ (Sirsi/Gadag)- ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಕಾಂಗ್ರೆಸ್ ಪಕ್ಷ ಆರೋಪಗಳನ್ನು ಮಾಡುವ ಜನಕವಾಗಿದೆ ಎಂದು ಸಚಿವ ಬಿ.ಶ್ರೀರಾಮುಲು (B.Sriramulu) ಹೇಳಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ವಿಚಾರದಲ್ಲಿಆಗಿರುವ ತಪ್ಪನ್ನು ನಾವೇ ಕಂಡು ಹಿಡಿದು ತಪ್ಪು ಮಾಡಿದವರನ್ನು ಆರೆಸ್ಟ್ ಮಾಡಿದ್ದೇವೆ. ಹೀಗಿದ್ದರೂ ಕಾಂಗ್ರೆಸ್ ನಾಯಕರು ನಮ್ಮ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಪರ್ಸಂಟೇಜ್ ವ್ಯವಹಾರವನ್ನು ಮಾಡಿದ್ದರು. ಅವರು ಮಾಡಿದ ತಪ್ಪುಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರಿಪಡಿಸುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಎಷ್ಟೋ ಆರೋಪಗಳು ಎದುರಾದವು. ಅವನ್ನು ಮುಚ್ಚಿ ಹಾಕುವ ಕೆಲಸ ಆಯಿತು. ನಮ್ಮ ಸರ್ಕಾರ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಕ್ರಮ ಕೈಗೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿಅಧಿಕಾರಕ್ಕೆ ಬರುವುದಿಲ್ಲಎಂಬ ಕಾರಣಕ್ಕೆ ಹತಾಶರಾಗಿ ಕಾಂಗ್ರೆಸ್ನ ಕೆಲ ನಾಯಕರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂತೋಷ್ ಹೇಳಿಕೆ ಸ್ವಾಗತಾರ್ಹ:
ಗದಗದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಪಿಎಸ್ಐ ನೇಮಕಾತಿ ಹಗರಣದ ತನಿಖೆಗೆ ಆದೇಶಿಸಿದ್ದು ನಮ್ಮ ಸರ್ಕಾರ. ಆದರೆ ಬಿಜೆಪಿ ಶಾಸಕರು, ಸಚಿವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗಾಳಿಯಲ್ಲಿ ಗುಂಡು ಹಾರಿಸುವ ಕಾಂಗ್ರೆಸ್ ನಾಯಕರು, ಅವರ ಬಳಿ ಸೂಕ್ತ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಸಚಿವ ಸಂಪುಟದಲ್ಲಿ ಯುವ ಮತ್ತು ಹೊಸಬರಿಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಲ್.ಸಂತೋಷ ಹೇಳಿಕೆ ಸ್ವಾಗತಾರ್ಹ. ಇದರಿಂದ ಜಿಡ್ಡು ಗಟ್ಟಿದ ವ್ಯವಸ್ಥೆಯಲ್ಲಿ ಸುಧಾರಣೆ ಬರಲಿದೆ. ರಾಜಕೀಯವಾಗಿ ನಿಶಕ್ತರಾದವರು ತೊಲಗಬೇಕು ಎಂದು ಸಚಿವ ಶ್ರೀರಾಮುಲು ಹೇಳಿದರು.
ಸಂಪುಟ ವಿಸ್ತರಣೆ ಸಿಎಂ ನಿರ್ಧಾರ:
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇನ್ನಿತರ ಹಿರಿಯರು ನಿರ್ಧರಿಸುತ್ತಾರೆ. ಹೊಸಬರಿಗೆ ಅವಕಾಶ ಸಿಗಬೇಕು ಎಂದು ಬಿ.ಎಲ್. ಸಂತೋಷ ಹೇಳಿದ್ದು ಸ್ವಾಗತಾರ್ಹ ಎಂದ ಅವರು, ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಪುನರುಚ್ಚರಿಸಿದರು.
ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಉತ್ತಮ ಆಡಳಿತ ನೀಡುತ್ತಿರುವ ಸಿಎಂ ಬೊಮ್ಮಾಯಿ ಅವರನ್ನು ಸದ್ಯ ಬದಲಾಯಿಸುವುದಿಲ್ಲ. ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಎಲ್ಲ ವರ್ಗ ಮತ್ತು ವಲಯದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.