ಹಾಸನ: ಕಾಡಾನೆ ಹಾವಳಿ ನಿಯಂತ್ರಣಕ್ಕೆ ಇದೀಗ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ. ಗುರುವಾರದಿಂದ ಆರಂಭವಾಗಿರುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದ್ದು, ದಸರಾ ಆನೆ ಅಭಿಮನ್ಯು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾನೆ. ಒಟ್ಟು ಎಂಟು ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ಶುಕ್ರವಾರ ಬೆಳಗ್ಗೆಯೇ ಆರಂಭವಾಗಿದೆ.
ಡಿಸೆಂಬರ್ 4ರಂದು ಕಾರ್ಯಾಚರಣೆ ವೇಳೆ ದಸರಾ ಆನೆ ಕ್ಯಾಪ್ಟನ್ ಅರ್ಜುನ ಕಾಡಾನೆ ದಾಳಿಯಿಂದ ಗಾಯಗೊಂಡು ಮೃತಪಟ್ಟಿತ್ತು. ಆ ನಂತರ ಕಾಡಾನೆ ಸೆರೆ ಕಾರ್ಯಾಚರಣೆಗೆ ತಾತ್ಕಾಲಿಕ ತೆರೆ ಬಿದ್ದಿತ್ತು. ಆದರೆ, ಅರ್ಜುನನ ಬಲಿ ಪಡೆದ ಆನೆ ಸೆರೆಹಿಡಿಯಲು ಜನ ಒತ್ತಾಯಿಸಿದ್ದರು.
ಕಾಡಾನೆ ಸೆರೆಗೆ ಕರೆತಂದಿರುವ ಸಾಕಾನೆಗಳು ಇದೀಗ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ತಾತ್ಕಾಲಿಕ ಆನೆ ಶಿಬಿರಕ್ಕೆ ಬಂದಿವೆ.
ಅಭಿಮನ್ಯು, ಪ್ರಶಾಂತ, ಹರ್ಷ, ಅಶ್ವತ್ಥಾಮ, ಸುಗ್ರೀವ, ಧನಂಜಯ, ಭೀಮ, ಮಹೇಂದ್ರ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಬಿಕ್ಕೋಡು ಸಮೀಪದ ತಾತ್ಕಾಲಿಕ ಆನೆ ಶಿಬಿರದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆಗೆ ಶಾಸಕ ಸುರೇಶ್ ಚಾಲನೆ ನೀಡಿದರು. ಸಿಸಿಎಫ್ ರವಿಶಂಕರ್, ಡಿಸಿಎಫ್ ಸದರನ್ ಕುಮಾರ್ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು.