ಬೆಂಗಳೂರು: ನಗರದ ಬೇಗೂರು ಬಳಿ ಇರುವ ಅಪಾರ್ಟ್ ಮೆಂಟ್ ನ 29ನೇ ಮಹಡಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಲಕಿ ಅಪಾರ್ಟ್ ಮೆಂಟ್ ನಲ್ಲಿ ಅಪ್ಪ-ಅಮ್ಮನ ಜೊತೆಗೆ ವಾಸವಿದ್ದಳು. ಇಂದು (ಜ.24) ನಸುಕಿನ ಜಾವ 5 ಗಂಟೆ ಸುಮಾರಿಗೆ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಬಾಲಕಿ ಖಾಸಗಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಳು. ತಂದೆ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ತಾಯಿ ಗೃಹಿಣಿ. ನಸುಕಿನ ಜಾವ 4.30ರ ಸುಮಾರ ಎಚ್ಚರಗೊಂಡು ಬಾಲಕಿ ಮನೆಯ ಪಡಸಾಲೆಗೆ ಬಂದಿದ್ದಾಳೆ. ಈ ವೇಳೆ ತಾಯಿ ಬಾಲಕಿಗೆ ಪ್ರಶ್ನೆ ಮಾಡಿದ್ದಾರೆ. ತಾಯಿಯ ಪ್ರಶ್ನೆಗೆ ಬಾಲಕಿ ಸರಿಯಾಗಿ ಉತ್ತರ ಕೊಡದೆ ಮತ್ತೆ ಮಲಗುವುದಾಗಿ ಹೇಳಿ ರೂಮಿಗೆ ಹೋಗಿದ್ದಾಳೆ. ತಾಯಿ ಕೂಡ ಕೋಣೆಯೊಳಗೆ ಹೋಗಿದ್ದಾರೆ.
ಆದರೆ ಸ್ವಲ್ಪಹೊತ್ತಿನ ಬಳಿಕ 5 ಗಂಟೆ ಸುಮಾರಿಗೆ ಬಾಲಕಿ 29ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಿಕಿ ಬೀಳುತ್ತಿದ್ದಂತೆ ಜೋರಾದ ಶಬ್ದ ಕೇಳಿಬಂದಿದೆ. ಕೂಡಲೇ ಅಪಾರ್ಟ್ಮೆಂಟ್ ಕಾವಲುಗಾರ ಹೊರ ಬಂದು ನೋಡಿದಾಗ ಬಾಲಕಿಯ ರಕ್ತಸಿಕ್ತ ಶವ ಕಂಡಿದೆ. ತತಕ್ಷಣ ಕಾವಲುಗಾರ ಪೋಷಕರಿಗೆ ಮತ್ತು ಅಪಾರ್ಟ್ಮೆಂಟ್ ಅಸೋಸಿಯೇಷನ್ ಗೆ ಮಾಹಿತಿ ನೀಡಿದ್ದಾರೆ.