ಮನೆ ರಾಜ್ಯ ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗದಿಂದ ಬಂದ ಜೀಪ್ ಢಿಕ್ಕಿ: ಓರ್ವ ಸಾವು

ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗದಿಂದ ಬಂದ ಜೀಪ್ ಢಿಕ್ಕಿ: ಓರ್ವ ಸಾವು

0

ಉಳ್ಳಾಲ: ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಥಾರ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಕ್ರ ಸಿಡಿದು ಮುಂಬದಿ ಚಲಿಸುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದು, ಸವಾರ ಡಿವೈಡರ್ ಗೆ ಬಡಿದು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕೊಲ್ಯ ಬಳಿ ಮಾ.5ರ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಕೊಲ್ಯ ನಿವಾಸಿ ಸಂತೋಷ್ ಬೆಳ್ಚಾಡ (45) ಮೃತಪಟ್ಟವರು.

ಜೀಪಿನಲ್ಲಿದ್ದ ಯುವಕರು ಗಾಂಜಾ ನಶೆಯಲ್ಲಿದ್ದು, ಅವರ ಅಜಾಗರೂಕತೆಯ ವಾಹನ ಚಾಲನೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂತೋಷ್ ಬಾಳೆಹಣ್ಣು ವ್ಯಾಪಾರಿಯಾಗಿದ್ದು, ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ಮಂಗಳೂರು ಕಡೆಯಿಂದ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಲ್ಲಿದ್ದ ಜೀಪ್ ಎದುರಿನಲ್ಲಿ ಧರ್ಮಸ್ಥಳದಿಂದ ಕಾಞಂಗಾಡ್ ಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ಬಲೇನೋ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ.

ಆಯತಪ್ಪಿದ ಕಾರು ಎದುರಿನಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಬೈಕ್ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಬೈಕ್ ಡಿವೈಡರ್ ಗೆ ಬಡಿದ ಪರಿಣಾಮ ಸಂತೋಷ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ತೆರಳುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.

ವಿವಾಹಿತರಾಗಿದ್ದ ಸಂತೋಷ್ ಪತ್ನಿ, ಇಬ್ಬರು ಪುತ್ರಿಯರನ್ಬು ಮತ್ತು ತಂದೆ ತಾಯಿಯನ್ನು ಅಗಲಿದ್ದಾರೆ. ಶ್ರಮಜೀವಿಯಾಗಿದ್ದ ಇವರು ಕುಟುಂಬದ ಆಧಾರ ಸ್ತಂಭವಾಗಿದ್ದರು.

ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.