ಮನೆ ಕಾನೂನು ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಹಲ್ಲೆ: 10 ವರ್ಷಗಳ ಬಳಿಕ ಮರು ತನಿಖೆಗೆ ಆದೇಶಿಸಿದ ವಿಚಾರಣಾ ನ್ಯಾಯಾಲಯದ...

ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಹಲ್ಲೆ: 10 ವರ್ಷಗಳ ಬಳಿಕ ಮರು ತನಿಖೆಗೆ ಆದೇಶಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಹೈಕೋರ್ಟ್

0

ಬೆಂಗಳೂರು: ಹತ್ತು ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ನಡೆದಿದ್ದ ಮಹಿಳೆಯ ಮೇಲಿನ ಹಲ್ಲೆ ಪ್ರಕರಣವನ್ನು ಮರು ತನಿಖೆ ಮಾಡಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

Join Our Whatsapp Group

ತಮ್ಮ ವಿರುದ್ಧದ ಪ್ರಕರಣದಲ್ಲಿ ಮರು ತನಿಖೆಗೆ ಆದೇಶಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಆರೋಪಿತರಾದ ರಾಜಾಜಿನಗರದ ಮುರಳೀಧರ ಹಾಗೂ ಹರೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಮಹಿಳೆಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಪತಿ ದೂರು ನೀಡಿದ್ದಾರೆ. ಪೊಲೀಸರು ಗಾಯಾಳು ಮಹಿಳೆಯ ಹೇಳಿಕೆಯನ್ನೇ ದಾಖಲಿಸಿಲ್ಲ. ಅಕೆಗೆ ಚಿಕಿತ್ಸೆ ನೀಡಿದ ವೈದ್ಯರ ಹೇಳಿಕೆ ದಾಖಲಿಸಿಲ್ಲ. ಜತೆಗೆ ವೈದ್ಯಕೀಯ ದಾಖಲೆಗಳನ್ನು ಕೂಡ ಸಲ್ಲಿಸಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿರುವ ಕ್ರಮ ಸರಿಯಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಯಾವುದೇ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ದೇವೇಂದ್ರ ನಾಥ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಯುತ ತನಿಖೆಗೆ ಅಗತ್ಯವಿದ್ದಾಗ ಮರು ತನಿಖೆ ಅವಶ್ಯವಿದೆ ಎಂದು ಸ್ಪಷ್ಟಪಡಿಸಿದೆ. ಅದರಂತೆ, ತನಿಖಾಧಿಕಾರಿ ಪ್ರಕರಣದಲ್ಲಿ ಸರಿಯಾಗಿ ತನಿಖೆ ಮಾಡಿಲ್ಲ ಎಂದಾದರೆ ಅಂತಹ ಸಂದರ್ಭದಲ್ಲಿ ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸಲು, ಗಾಯಗೊಂಡಿದ್ದ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ಹಾಗೂ ಸಂತ್ರಸ್ತರ ಹೇಳಿಕೆ ಪಡೆಯಲು, ಮತ್ತೆ ತನಿಖೆ ನಡೆಸಲು ಅವಕಾಶ ಕೋರಬಹುದಾಗಿದೆ. ಹೀಗಾಗಿ, ಪೊಲೀಸರು ಸ್ವತಂತ್ರವಾಗಿ ಮತ್ತೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಿಅರ್ಪಿಸಿ ಸೆಕ್ಷನ್ 173 (8) ರಡಿ ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಬೇಕು ಎಂದು ಹೈಕೋರ್ಟ್, ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: 2013ರ ಡಿಸೆಂಬರ್ 25 ರಂದು ರಾಜಾಜಿನಗರದ ಷಡಕ್ಷರಿ ಎಂಬುವರು ಆರೋಪಿತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ, ಮಧ್ಯಾಹ್ನ 1.30 ಸುಮಾರಿಗೆ ತಾವು ಮನೆಯಲ್ಲಿದ್ದಾಗ ಆರೋಪಿ ಮುರಳೀಧರ್ ಮತ್ತು ಹರೀಶ್ ತಮ್ಮ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಮನಬಂದಂತೆ ಹಲ್ಲೆ ಮಾಡುತ್ತಿದ್ದರು, ಪತ್ನಿಗೆ ಕಾಲಿನಿಂದ ಒದೆಯುತ್ತಿದ್ದರು.

ಪತ್ನಿಯ ಕಿರುಚಾಟ ಕೇಳಿ ಹತ್ತಿರ ಹೋಗಿ, ರಕ್ಷಿಸಲು ಯತ್ನಿಸಿದಾಗ ಪ್ರಶ್ನಿಸಿದಾಗ ನನಗೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು. ತಾವು ರಕ್ಷಣಾ ವೇದಿಕೆ ಕಾರ್ಯಕರ್ತರಾಗಿದ್ದು ತಮಗೆ ಸಂಘದ ಬೆಂಬಲವಿದೆ, ಯಾರೂ ಪ್ರಶ್ನಿಸುವುದಿಲ್ಲ ಎಂದರು. ಹಾಗೆಯೇ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋದರು. ಹಲ್ಲೆಯಿಂದ ಪ್ರಜ್ಞಾಹೀನಳಾಗಿದ್ದ ಪತ್ನಿಯನ್ನು ಪೊಲೀಸರ ನೆರವಿನೊಂದಿಗೆ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪತಿ ಮಾಗಡಿ ರಸ್ತೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸದೆ, ವೈದ್ಯಕೀಯ ದಾಖಲೆಗಳಿಲ್ಲದೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇನ್ನು ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಳ್ಳುವ ವೇಳೆಗೆ ದೂರುದಾರರು ಸಿಅರ್ಪಿಸಿ ಸೆಕ್ಷನ್ 301ರ ಅಡಿ ಅರ್ಜಿ ಸಲ್ಲಿಸಿ, ಪ್ರಾಸಿಕ್ಯೂಷನ್ ಗೆ ಖಾಸಗಿ ವಕೀಲರ ನೆರವು ಕೊಡಿಸುತ್ತಿದ್ದರು. ಬಳಿಕ ದೂರುದಾರರ ಕೋರಿಕೆಯಂತೆ ಪ್ರಕರಣದ ಮರು ತನಿಖೆ ಕೋರಿ ಎಪಿಪಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಸಾಕ್ಷಿಗಳನ್ನು ಸಿಬಿರ್ಪಿಸಿ ಸೆಕ್ಷನ್ 311 ರ ಅಡಿ ಕರೆಸಬಹುದು ಮತ್ತು ಸಾಕ್ಷ್ಯಗಳನ್ನು ಸಿಆರ್ಪಿಸಿ ಸೆಕ್ಷನ್ 91ರ ಅಡಿ ಪಡೆಯಬಹುದು ಎಂದು ತಿಳಿಸಿ ಮರು ತನಿಖೆ ಮನವಿಯನ್ನು ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ದೂರುದಾರರು ಸೆಷನ್ಸ್ ಕೋರ್ಟ್ ಗೆ ರಿವಿಷನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಸಾಕ್ಷಿದಾರರು ಮತ್ತು ದಾಖಲೆಗಳನ್ನು ಪಡೆಯಲು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅವಕಾಶವಿದ್ದರೂ, ಅಗತ್ಯ ದಾಖಲೆಗಳಿಲ್ಲದೆ ಆರೋಪಿತರ ಮೇಲೆ ದೋಷಾರೋಪ ನಿಗದಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮರು ತನಿಖೆ ಅಗತ್ಯವಿದೆ ಎಂದು ಆದೇಶಿಸಿತ್ತು.

ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಪ್ರಕರಣದ ಆರೋಪಿತರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇವರ ಪರ ವಾದ ಮಂಡಿಸಿದ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯ ಈಗಾಗಲೇ ಸಾಕ್ಷ್ಯ ದಾಖಲು ಪ್ರಕ್ರಿಯೆ ಮುಗಿಸಿ, ಸಿಆರ್ಪಿಸಿ ಸೆಕ್ಷನ್ 313ರ ಅಡಿ ಹೇಳಿಕೆ ದಾಖಲಿಸಿಕೊಂಡಿದೆ. ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದೆ. ಈ ಹಂತದಲ್ಲಿ ಮರು ತನಿಖೆ ಕೋರಿರುವುದು ಸರಿಯಲ್ಲ.

ಮರು ತನಿಖೆ ಕೋರಿ ಅರ್ಜಿ ಸಲ್ಲಿಸಲು ಸಾಕಷ್ಟು ವಿಳಂಬವಾಗಿದೆ. ಇನ್ನು ಸಾಕ್ಷಿಗಳನ್ನು ಸಿಆರ್ಪಿಸಿ ಸೆಕ್ಷನ್ 311 ಮತ್ತು 91ರ ಅಡಿಯೂ ಪಡೆಯಲು ನ್ಯಾಯಾಲಯಕ್ಕೆ ಅವಕಾಶವಿದೆ. ಮರು ತನಿಖೆಗೆ ಆದೇಶಿಸಿರುವ ಸೆಷನ್ಸ್ ಕೋರ್ಟ್ ಕ್ರಮ ಸರಿಯಲ್ಲ. ಆದ್ದರಿಂದ, ಸೆಷನ್ಸ್ ಕೋರ್ಟ್ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.