ನವದೆಹಲಿ: ಗುಜರಾತ್ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಯಾವ ಪೊಲೀಸ್ ಅಧಿಕಾರಿಯಾಗಲಿ ಹತ್ಯೆಗೈದರೆ ಅವರಿಗೆ 1,11,11,111 ರೂಪಾಯಿ ಬಹುಮಾನ ನೀಡುವುದಾಗಿ ಕ್ಷತ್ರೀಯ ಕರ್ಣಿ ಸೇನಾ ಘೋಷಿಸಿದೆ.
ಜೀ ನ್ಯೂಸ್ ವರದಿ ಪ್ರಕಾರ, ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್, ಬಿಷ್ಣೋಯಿಯನ್ನು ಹ*ತ್ಯೆಗೈಯುವ ಯಾವುದೇ ಪೊಲೀಸ್ ಅಧಿಕಾರಿ ಇರಲಿ ಅವರಿಗೆ 1,11,11,111 ರೂಪಾಯಿ ಇನಾಮು ನೀಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ಕೊ*ಲೆಗೀಡಾಗಿದ್ದ ಎನ್ ಸಿಪಿ ಮುಖಂಡ ಬಾಬಾ ಸಿದ್ಧಿಕಿ ಹ*ತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿತ್ತು. ಸಾಬರಮತಿ ಜೈಲಿನಲ್ಲಿ ಬಂಧಿಯಾಗಿರುವ ಬಿಷ್ಣೋಯಿ ಪಾತಕ ಕೃತ್ಯ ಎಸಗುತ್ತಿದ್ದರೂ ಕೂಡಾ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರ ಕಣ್ಮುಚ್ಚಿ ಕುಳಿತಿರುವುದಾಗಿ ಶೇಖಾವತ್ ಆರೋಪಿಸಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೂ ಏಪ್ರಿಲ್ ತಿಂಗಳಿನಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ಆದರೆ ಲಾರೆನ್ಸ್ ಬಿಷ್ಣೋಯಿಯನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಮುಂಬೈ ಪೊಲೀಸರು ವಿಫಲರಾಗಿದ್ದರು.