ಮನೆ ಸುದ್ದಿ ಜಾಲ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹ: ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ..!

ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹ: ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ..!

0

ಬೆಂಗಳೂರು : ದೀರ್ಘಕಾಲದ ಕಾನೂನು ಹೋರಾಟ ಮತ್ತು ರಾಜಕೀಯ ಜಿದ್ದಾಜಿದ್ದಿನ ನಂತರ, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ಶನಿವಾರ ವಿಧಾನಸಭೆ ಸಚಿವಾಲಯ ಅಧಿಕೃತ ಆದೇಶ ಹೊರಡಿಸಿದೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ನಂತರದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತೀಯ ಸಂವಿಧಾನದ ವಿಧಿ 191(1)(e) ಮತ್ತು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8ರ ಅಡಿಯಲ್ಲಿ ಈ ಅನರ್ಹತೆ ಆದೇಶವನ್ನು ಹೊರಡಿಸಲಾಗಿದೆ. ನಿಯಮಗಳ ಪ್ರಕಾರ, ಯಾವುದೇ ಜನಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಯಾದಲ್ಲಿ ಅವರು ತಕ್ಷಣವೇ ಶಾಸಕ ಸ್ಥಾನಕ್ಕೆ ಅನರ್ಹರಾಗುತ್ತಾರೆ.

ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ನಂತರವೂ ವಿಧಾನಸಭೆ ಸಚಿವಾಲಯ ಅನರ್ಹತೆ ಆದೇಶ ಹೊರಡಿಸಲು ವಿಳಂಬ ಮಾಡುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಗಂಭೀರವಾಗಿ ಆರೋಪಿಸಿತ್ತು. ವಿನಯ್ ಕುಲಕರ್ಣಿ ಅವರು ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಲು ಸರ್ಕಾರ ಸಮಯಾವಕಾಶ ಮಾಡಿಕೊಡುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಆದರೆ, ಇದೀಗ ಎಲ್ಲಾ ಆಸರೆಗಳಿಗೆ ತೆರೆ ಬಿದ್ದಿದ್ದು, ಅಧಿಕೃತವಾಗಿ ವಿನಯ್ ಕುಲಕರ್ಣಿ ಮಾಜಿ ಶಾಸಕರಾಗಿದ್ದಾರೆ.