ಮನೆ ರಾಷ್ಟ್ರೀಯ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ ಡೆಲಿವರಿ ಏಜೆಂಟ್

ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ ಡೆಲಿವರಿ ಏಜೆಂಟ್

0

ಹೈದರಾಬಾದ್: ಆನ್ ಲೈನ್ ಡೆಲಿವರಿ ನೀಡಲು ತೆರಳಿದ್ದ ಡೆಲಿವರಿ ಬಾಯ್, ಗ್ರಾಹಕನ ಮನೆಯ ನಾಯಿಯಿಂದ ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

Join Our Whatsapp Group

ಹೈದರಾಬಾದ್ ನ ಪಂಚವಟಿ ಕಾಲೋನಿಯ ಶ್ರೀನಿಧಿ ಹೈಟ್ಸ್ ಅಪಾರ್ಟ್ ಮೆಂಟ್ಸ್ ನಲ್ಲಿ ಭಾನುವಾರ ಘಟನೆ ನಡೆದಿದೆ.

30 ವರ್ಷದ ಡೆಲಿವರಿ ಏಜೆಂಟ್, ಅಪಾರ್ಟ್ ಮೆಂಟ್ಸ್ ನಿವಾಸಿಯ ಮನೆಗೆ ಮ್ಯಾಟ್ರೆಸ್ ಡೆಲಿವರಿ ಮಾಡಲು ತೆರಳಿದ್ದರು. ಗ್ರಾಹಕನ ಮನೆ ಬಾಗಿಲು ಭಾಗಶಃ ತೆರೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಗಿಲು ತೆರೆದಿದ್ದರಿಂದ ಒಳಗಿದ್ದ ಡಾಬರ್ ಮನ್ ನಾಯಿ ಡೆಲಿವರಿ ಏಜೆಂಟ್ ಮೊಹಮ್ಮದ್ ಇಲ್ಯಾಸ್ ಮೇಲೆ ಏಕಾಏಕಿ ನುಗ್ಗಿದೆ. ತನ್ನ ಚೂಪಾದ ಹಲ್ಲುಗಳನ್ನು ತೋರಿಸುತ್ತಾ, ಜೋರಾಗಿ ಬೊಗಳುತ್ತಾ ನುಗ್ಗಿದ ದಷ್ಟಪುಷ್ಟ ನಾಯಿಯನ್ನು ಕಂಡು ಇಲ್ಯಾಸ್ ಭಯಬಿದ್ದಿದ್ದಾರೆ. ನಾಯಿಯಿಂದ ತಮ್ಮನ್ನು ಕಾಪಾಡಿಕೊಳ್ಳಲು ಅಪಾರ್ಟ್ ಮೆಂಟ್ ನ ಮನೆಯ ಮುಂಭಾಗದ ಚಿಕ್ಕ ಗೋಡೆಯನ್ನು ಹಾರಿದ್ದಾರೆ.

ಗ್ರಾಹಕ ಹಾಗೂ ಇತರೆ ನಿವಾಸಿಗಳು ಇಲ್ಯಾಸ್ ಅವರನ್ನು ಕಾಪಾಡಲು ಕೂಡಲೇ ಧಾವಿಸಿದರೂ ಇಲ್ಯಾಸ್ ಅವರು ಜಾರಿ ಮೂರು ಮಹಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ. ಕೂಡಲೇ ಅಪಾರ್ಟ್ ಮೆಂಟ್ ನಿವಾಸಿಗಳು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.

ರಾಯದುರ್ಗಂ ಪೊಲೀಸರು ಐಪಿಸಿ ಸೆಕ್ಷನ್ 289ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗಾಯಾಳು ಡೆಲಿವರಿ ಏಜೆಂಟ್ ಇಲ್ಯಾಸ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ನಾಯಿಯ ಮಾಲೀಕರೇ ಭರಿಸಬೇಕು ಎಂದು ತೆಲಂಗಾಣ ಗಿಗ್ ಆಂಡ್ ಪ್ಲಾಟ್ ಫಾರ್ಮ್ ಕೆಲಸಗಾರರ ಒಕ್ಕೂಟ (ಟಿಜಿಪಿಡಬ್ಲ್ಯೂಯು) ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.

ಇಲ್ಯಾಸ್ ಅವರು ತಮ್ಮ ಕರ್ತವ್ಯದ ವೇಳೆ ಗಾಯಗೊಂಡಿದ್ದಾರೆ. ಅವರಿಗೆ ತಕ್ಷಣಕ್ಕೆ ಕೆಲಸಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಜೀವನೋಪಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಅವರಿಗೆ ಇ- ಕಾಮರ್ಸ್ ಕಂಪೆನಿ ಪ್ರತಿದಿನ ಕನಿಷ್ಠ 1 ಸಾವಿರ ರೂ ನೀಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಹಿಂದಿನ ಲೇಖನವಿನಯ್ ಗುರೂಜಿ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್
ಮುಂದಿನ ಲೇಖನಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಬಾಲಕರು ನೀರುಪಾಲು