ಮನೆ ಭಾವನಾತ್ಮಕ ಲೇಖನ ಸಮರಸದ ಬದುಕಿಗೆ ಬೇಕು ಹೊಂದಾಣಿಕೆ

ಸಮರಸದ ಬದುಕಿಗೆ ಬೇಕು ಹೊಂದಾಣಿಕೆ

0

ಹೊಂದಾಣಿಕೆಯೇ ಜೀವನ ಎಂದಿದ್ದಾರೆ ಮನಶಾಸ್ತ್ರಜ್ಞದ ಪಿತಾಮಹ ಸಿಗ್ಮಂಡ್ ಪ್ರಾಯ್ಡ್.

ಆದರೆ ‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ, ಹೊಂದಿಕೆ ಎಂಬುದು ಎಷ್ಟು ಕಷ್ಟವೋ ಈ ಮೂರು ದಿನದ ಬದುಕಿನಲಿ’ – ರಾಷ್ಟ್ರಕವಿ ಜಿ. ಎಸ್. ಶಿವರುದ್ದಪ್ಪ ಅವರ ಕವನದ ಸಾಲುಗಳಿವು.

ಹೌದು. ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಬೆರೆತು ಬಾಳಬೇಕಾದುದು ಬದುಕಿನ ನಿಯಮ. ಆದರೆ ಹೊಂದಿಕೊಂಡು ಬಾಳುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅನೇಕ ಬಾರಿ ನಮ್ಮೊಳಗಿನ ಅಹಂಭಾವ ನಮ್ಮನ್ನು ಬೇರೆಯದೇ ರೀತಿಯಲ್ಲಿಬದುಕುವಂತೆ ಮಾಡುತ್ತದೆ. ಕೆಲವೊಮ್ಮೆ ನಾವೇ ಮಾತಾನಾಡಿಕೊಳ್ಳುತ್ತಿರುತ್ತೇವೆ, ‘ಎಲ್ಲದಕ್ಕೂ ನಾವೇ ಅಡ್ಜಸ್ಟ್ ಆಗಬೇಕಾ?’ ಎಂದು. ಹೌದು. ನಾವೇ ಅನುಸರಿಸಿಕೊಂಡು ಹೋದರೆ ನಮ್ಮೊಂದಿಗೆ ಸುತ್ತಮುತ್ತಲಿನವರೂ ನಮ್ಮನ್ನು ಅನುಸರಿಸುತ್ತಾರೆ. ಅದು ಸಾಮರಸ್ಯದ ಬದುಕಿಗೂ ಕಾರಣವಾಗುತ್ತದೆ. ‘ಹೊಂದಿಕೊಂಡು ಹೋಗುವುದು’ ಅದೊಂದು ರೀತಿಯಲ್ಲಿಎಮೋಷನಲ್ ಇಂಟೆಲಿಜೆನ್ಸ್ ಇದ್ದ ಹಾಗೆ.

ಶೇ.85ರಷ್ಟು ಮಂದಿ ಜೀವನದಲ್ಲಿಯಶಸ್ಸು ಹೊಂದಲು ಮುಖ್ಯ ಕಾರಣವಾಗುವುದು ನಮ್ಮ ಸುತ್ತಮುತ್ತಲಿನವರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡುವುದು ಮತ್ತು ಸಂವಹನ ಕೌಶಲದಿಂದ ಎಂಬುದಾಗಿ ಸಂಶೋಧನಾ ಅಧ್ಯಯನವೊಂದು ತಿಳಿಸುತ್ತದೆ.

ಇದಕ್ಕೆ ಪೂರಕವಾಗಿ ಮನಶಾಸ್ತ್ರಜ್ಞ ಸಿಡ್ನಿ ಜೊರಾರ್್ಡ, ‘ಯಾವಾಗ ನಾವು ಸಂಬಂಧವನ್ನು ಬೆಳೆಸಲು ಮತ್ತು ಆ ಸಂಬಂಧವನ್ನು ಉಳಿಸಿಕೊಳ್ಳಲು ಯಶಸ್ವಿಯಾಗುತ್ತೇವೆಯೋ ಅದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಜನರೊಂದಿಗೆ ನಾವು ಸಂವಹನ ನಡೆಸುವಲ್ಲಿವಿಫಲರಾಗುವುದೇ ನಮ್ಮ ದುಃಖಗಳಿಗೆ ಕಾರಣ’ ಎಂದಿದ್ದಾರೆ.

ಡಬ್ಲಿನ್ನ ಟ್ರಿನಿಟಿ ಕಾಲೇಜಿನ ಸಂಶೋಧಕರು ನಡೆಸಿದ ಅಧ್ಯಯನವೊಂದರ ಪ್ರಕಾರ ಮನುಷ್ಯನ ಮಿದುಳು ತುಂಬಾ ಸಂಕೀರ್ಣ. ಟೀಂ ವರ್ಕ್, ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಕೆಲಸ ಮಾಡುವಾಗ ಮನಸ್ಸು ವಿಭಿನ್ನವಾಗಿ ಯೋಚಿಸುತ್ತದೆ ಎಂದು. ಅದರಿಂದಾಗಿಯೇ ಹೊಂದಾಣಿಕೆಯ ಅಭಾವ ಎದ್ದು ಕಾಣುತ್ತದೆ.

ಹೊಂದಾಣಿಕೆ ಮತ್ತು ಪರಸ್ಪರ ಸಹಕಾರಿ ಮನೋಭಾವ ಹೊಂದುವುದು ಈಚಿನ ದಿನಗಳಲ್ಲಿಬಹಳ ಅಗತ್ಯ. ಹೊಂದಾಣಿಕೆಯಿಲ್ಲದ ಮನಸ್ಥಿತಿಯಿಂದಾಗಿಯೇ ಕೂಡು ಕುಟುಂಬಗಳು ಕಡಿಮೆಯಾಗಿವೆ ಎಂಬುದೊಂದು ವಾದ. ಹೊಂದಾಣಿಕೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ, ಅಂದರೆ ಕುಟುಂಬ, ಪತಿ-ಪತ್ನಿ, ಸಹೋದರ-ಸಹೋದರಿ, ನೆಂಟರಿಷ್ಟರು, ಬಂಧುಗಳು, ಸಹದ್ಯೋಗಿಗಳೊಂದಿಗೆ, ಸಾರ್ವಜನಿಕ ಸ್ಥಳಗಳಲ್ಲಿಪರಸ್ಪರ ಹೊಂದಾಣಿಕೆ ಬಹಳ ಅಗತ್ಯ. ಮಾತ್ರವಲ್ಲಅನಿವಾರ್ಯವೂ ಹೌದು.

ಹೊಂದಾಣಿಕೆಗೆ…

ಮನಸ್ಸನ್ನು ನಿರಾಳವಾಗಿಸಿಕೊಳ್ಳಿ: ಯಾವಾಗ ಮನಸ್ಸು ನಿರ್ಲಿಪ್ತಭಾವದಿಂದ ಆರಾಮದಾಯಕವಾಗಿಸಿಕೊಳ್ಳುತ್ತೇವೆಯೋ ಇತರರೊಂದಿಗೆ ನಿರಾಳವಾಗಿ ವ್ಯವಹರಿಸುವುದಕ್ಕೆ ಸಾಧ್ಯ.

ಆಸಕ್ತಿ ಹಾಗೂ ಗಮನ ನೀಡುವುದು: ಇತರರೊಂದಿಗೆ ಸಂವಹನ ನಡೆಸುವಾಗ ಆಸಕ್ತಿ ಇಲ್ಲದಂತೆ, ಚಂಚಲ ಮನಸ್ಸಿನವರಂತೆ ವರ್ತಿಸುವುದು ಉತ್ತಮ ಸಂವಹನಕ್ಕೆ ದಾರಿ ಮಾಡಿಕೊಡುವುದಿಲ್ಲ. ಮಾತನಾಡುವಾಗ ಪರಸ್ಪರ ಆಸಕ್ತಿಯಿಂದ ವರ್ತಿಸಿದರೆ ಎದುರಿಗಿದ್ದವರ ನಡುವೆ ಉತ್ತಮ ಸಂವಹನವೇರ್ಪಡುತ್ತದೆ. ಅದು ಬಾಂಧವ್ಯಕ್ಕೆ ಕಾರಣವಾಗುತ್ತದೆ.

ಮುಕ್ತ ಮನಸ್ಥಿತಿ: ವೈವಿಧ್ಯಮಯ ಸಂಸ್ಕೃತಿಯ ಜನರು ಇರುವಾಗ ಮನಸ್ಥಿತಿಗಳೂ ವಿಭಿನ್ನವಾಗಿರುವುದು ಸಹಜ. ಸಣ್ಣತನದಿಂದ, ಪೂರ್ವಭಾವಿ ಕಲ್ಪನೆಗಳೊಂದಿಗೆ ವ್ಯಕ್ತಿಯೊಂದಿಗೆ ಸಂವಹನ ನಡೆಸುವುದಕ್ಕೆ ಸಾಧ್ಯವಿಲ್ಲ. ಮುಕ್ತ ಮನಸ್ಸಿನಿಂದ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ನಮ್ಮದೇ ಪೂರ್ವಯೋಜಿತ ಕಲ್ಪನೆ ಹೊಂದಿ, ವ್ಯಕ್ತಿಯ ಅಂತರಾತ್ಮವನ್ನು ಅರಿಯದೇ ಹೋದರೆ ಉತ್ತಮ ಸಂವಹನಕ್ಕೆ ಸಾಧ್ಯವಿಲ್ಲ. ವ್ಯಕ್ತಿಯೊಂದಿಗೆ ಹೊಂದಾಣಿಕೆಯಿಂದ ಬಾಳುವುದಕ್ಕೆ ಸಾಧ್ಯವಾಗುವುದಿಲ್ಲ.

ವ್ಯಕ್ತಿಗಳ ಬಗ್ಗೆ ತೀರ್ಪು ನೀಡುವುದು: ಭೇಟಿಯಾದ ಒಮ್ಮೆಗೇ ಅವರ ವರ್ತನೆಗೆ, ಬಾಹ್ಯನೋಟಕ್ಕೆ ನಾವೇ ಒಂದು ಲೇಬಲ್ ಹಚ್ಚಿಬಿಡುವುದು, ಆ ವ್ಯಕ್ತಿ ಹೀಗೇಯೇ ಎಂದು ನಾವೇ ತೀರ್ಮಾನಿಸಿಬಿಡುವುದು ತರವಲ್ಲ. ಹಾಗೆ ಮಾಡುವುದರಿಂದ ಅವರೊಂದಿಗಿನ ಒಡನಾಟ ಕಳೆದುಕೊಳ್ಳುತ್ತೇವೆ.

ಲವಲವಿಕೆಯಿಂದಿರಿ: ಯಾವಾಗಲೂ ಚಿಂತೆಯಲ್ಲಿಮುಳುಗಿದವರಂತೆ ಕಂಡುಬಂದರೆ ಮೂಡಿ ಎಂದು ಕರೆಸಿಕೊಳ್ಳುತ್ತೇವೆ. ಕೇವಲ ಸಮಸ್ಯೆಗಳನ್ನು ಹಂಚಿಕೊಳ್ಳದೆ, ಬದುಕಿನ ಬಗೆಗೆ ನಕಾರಾತ್ಮಕ ಚಿಂತೆಗಳನ್ನೇ ಚರ್ಚಿಸದೇ ಆಶಾವಾದ ಹೊಂದಬೇಕು. ನಮ್ಮ ಸಮಸ್ಯೆಗಳನ್ನು ತೋರಿಸಿಕೊಳ್ಳದೆ, ಎಲ್ಲರೊಳಗೊಂದಾಗಿ ಬಾಳುವುದರಲ್ಲಿಹೆಚ್ಚು ಅರ್ಥವಿದೆ. ಅದರಿಂದ ಬಾಂಧವ್ಯಕ್ಕೆ ಕಾರಣವಾಗುತ್ತದೆ.