ಬೆಂಗಳೂರು: ನಿಷೇಧಿತ ತಾಲಿಬಾನ್ ಹಾಗೂ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಅಂತಾರಾಷ್ಟ್ರೀಯ ಸದಸ್ಯರೊಂದಿಗೆ ಸಂಪರ್ಕ ಹಾಗೂ ಯುವಕರ ನೇಮಕಾತಿ ಮಾಡುತ್ತಿದ್ದ ಆರೋಪದಡಿ ಬಂಧನವಾಗಿರುವ ಮಹಾರಾಷ್ಟ್ರ ಮೂಲದ ಹಮ್ರಾಜ್ ವೋರ್ಷಿದ್ ಶೇಕ್‌ಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 63 ಸಾವಿರ ರೂ. ದಂಡ ವಿಧಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ ಎನ್ನಲಾಗುತ್ತಿದೆ.
ಕಳೆದ 2023ರ ಎಪ್ರಿಲ್‌ನಲ್ಲಿ ಹಮ್ರಾಜ್ ವೋರ್ಷಿದ್ ಶೇಕ್ ಮತ್ತು ಮೊಹಮ್ಮದ್ ಆರೀಫ್ ಎಂಬ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಎನ್ಐಎ, ಅದೇ ವರ್ಷ ಅಕ್ಟೋಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ ಆರೋಪಿಗಳ ಪೈಕಿ ಹಮ್ರಾಜ್‌ಗೆ 7 ವರ್ಷ ಜೈಲು ಶಿಕ್ಷೆ ಮತ್ತು 63 ಸಾವಿರ ರೂ. ದಂಡ ವಿಧಿಸಿದೆ. ವಿಚಾರಣೆ ಮುಂದುವರೆದಿದೆ. 2019 ರಿಂದ 2022ರವರೆಗೂ ಸೌದಿ ಅರೇಬಿಯಾದಲ್ಲಿದ್ದ ಹಮ್ರಾಜ್, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ಮೂಲದ ಕೆಲವರ ಸಂಪರ್ಕದಿಂದ ತಾಲಿಬಾನ್ ಮತ್ತು ಟಿಟಿಪಿ ಸಿದ್ಧಾಂತದಿಂದ ಪ್ರಚೋದನೆಗೊಂಡಿದ್ದ. ಈತನ ವಿಚಾರಣೆಯಲ್ಲಿ ಉಗ್ರ ಸಂಘಟನೆಗಳ ಹಂಝಲಾ ಎಂಬ ಆನ್‌ಲೈನ್ ಹ್ಯಾಂಡ್ಲರ್ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಈ ಹಂಝಲಾ ಎಂಬಾತ ಕಾಶ್ಮೀರ ಪೇಜ್ ಎಂಬ ಇನ್‌ಸ್ಟಾಗ್ರಾಂ ಖಾತೆ ಮೂಲಕ ಯುವಕರನ್ನು ಪ್ರಚೋದಿಸಿ ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆದರಿಂದ ಭಾರತಕ್ಕೆ ವಾಪಸ್ ಬಂದ ಬಳಿಕ ಹಮ್ರಾಜ್, ತನ್ನ ಸ್ನೇಹಿತ ಹಾಗೂ ಮೊಹಮ್ಮದ್ ಆರೀಫ್ ಜತೆ ಸೇರಿ ತಾಲಿಬಾನ್ ಮತ್ತು ಟಿಟಿಪಿ ಉಗ್ರ ಸಂಘಟನೆ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು. ಆರ್ಥಿಕ ಮತ್ತು ಇತರೆ ಸಂಕಷ್ಟದಲ್ಲಿ ಸಿಲುಕಿದ್ದ ಯುವಕರನ್ನು ಸಂಘಟನೆ ಪರವಾಗಿ ಕೆಲಸ ಮಾಡಲು ಪ್ರಚೋದಿಸಿ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದರು. ಪ್ರಮುಖ ವಿಚಾರವೆಂದರೆ, ಇಬ್ಬರು ಭಾರತದ ವಿರುದ್ಧ ಜಿಹಾದ್ ಯುದ್ಧ ನಡೆಸಲು ಟಿಟಿಪಿ ಸೇರುವ ಉದ್ದೇಶದಿಂದ ತಮ್ಮದೇ ತಂಡ ಕಟ್ಟುವ ಸಿದ್ಧತೆಯಲ್ಲಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ ಎನ್ನಲಾಗುತ್ತಿದೆ.
















