ಬೆಂಗಳೂರು: ಧರ್ಮಸ್ಥಳಕ್ಕೆ ಕಳಂಕ ತರುವ ಉದ್ದೇಶದಿಂದ ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಚಿನ್ನಯ್ಯ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅದರಲ್ಲಿನ ಹೇಳಿಕೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಅಲ್ಲದೆ, ಧರ್ಮಸ್ಥಳ ವಿರುದ್ಧದ ಷಡ್ಯಂತ್ರಕ್ಕೆ 200 ಕೋಟಿ ರೂಪಾಯಿ ಬಜೆಟ್ ಸಿದ್ಧವಾಗಿತ್ತು ಹಾಗೂ ಕೇರಳದಿಂದ ಹಣಕಾಸಿನ ಸಂಪರ್ಕವಿತ್ತು ಎಂಬ ಆರೋಪವೂ ಮಾಡಲಾಗಿದೆ.

ರಿಟ್ ಅರ್ಜಿಯಲ್ಲಿ ಏನಿದೆ?
ಚಿನ್ನಯ್ಯ ಸಲ್ಲಿಸಿರುವ ಅರ್ಜಿಯ ಪ್ರಕಾರ, ಒಂದು ದಿನ ರಾತ್ರಿ ಸುಮಾರು 8 ಗಂಟೆಗೆ ಬುರುಡೆ ಗ್ಯಾಂಗ್ ಸದಸ್ಯನಾಗಿರುವ ಗಿರೀಶ್ ಮಟ್ಟಣ್ಣವರ್ ಅವರು ನಟ ಪ್ರಕಾಶ್ ರಾಜ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಬಳಿಕ ಫೋನ್ ಅನ್ನು ಚಿನ್ನಯ್ಯನಿಗೆ ನೀಡಿದ್ದಾರೆ ಎನ್ನಲಾಗಿದೆ.
ಅರ್ಜಿಯಲ್ಲಿನ ಹೇಳಿಕೆಯ ಪ್ರಕಾರ, ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿದ್ದು, ಗಿರೀಶ್ ಮಟ್ಟಣ್ಣವರ್ ಸೂಚಿಸಿದ ವಿಷಯಗಳನ್ನು ಅಧಿಕಾರಿಗಳ ಮುಂದೆ ಹೇಳುವಂತೆ ತಿಳಿಸಿದ್ದರು ಎಂದು ಚಿನ್ನಯ್ಯ ಆರೋಪಿಸಿದ್ದಾನೆ. ಜೊತೆಗೆ, ಹೇಳಿದಂತೆ ನಡೆದುಕೊಂಡರೆ ಜೂನ್ 29ರಂದು ಬಂದು ಅಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದರು ಎಂಬುದನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
200 ಕೋಟಿ ರೂಪಾಯಿ ಬಜೆಟ್ ಆರೋಪ
ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸಲು ಒಟ್ಟು 200 ಕೋಟಿ ರೂಪಾಯಿಗಳ ಬಜೆಟ್ ಸಿದ್ಧವಾಗಿತ್ತು ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾನೆ. ಈ ಸಂಚಿನ ಭಾಗವಾಗಿ ತನಗೆ 50 ಲಕ್ಷ ರೂಪಾಯಿ ನೀಡುವ ಆಮಿಷ ಒಡ್ಡಲಾಗಿತ್ತು ಎಂದು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆರೋಪಿಸಲಾಗಿದೆ.
ಇದಲ್ಲದೆ, ಈ ಷಡ್ಯಂತ್ರಕ್ಕೆ ಕೇರಳದಿಂದ ಹಣ ಬಂದಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರೂ ಹಣಕಾಸಿನ ನೆರವು ನೀಡಿದ್ದರು ಎಂದು ಆರೋಪಿಸಲಾಗಿದೆ. ತಮ್ಮ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ಹಾಗೂ ನಗದು ವಹಿವಾಟಿನ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಚಿನ್ನಯ್ಯ ತಿಳಿಸಿದ್ದಾನೆ.

ಎಸ್‌ಐಟಿ ವಿರುದ್ಧವೂ ಆರೋಪ
ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲಗೌಡ ಹಾಗೂ ಜಯಂತ್ ಅವರು ಈ ಷಡ್ಯಂತ್ರದ ಪ್ರಮುಖ ರೂವಾರಿಗಳಾಗಿದ್ದಾರೆ ಎಂದು ಚಿನ್ನಯ್ಯ ಆರೋಪಿಸಿದ್ದಾನೆ. ಆರೋಪಿಗಳ ಹೆಸರುಗಳನ್ನು ನೀಡಿದರೂ ವಿಶೇಷ ತನಿಖಾ ತಂಡ (ಎಸ್‌ಐಟಿ) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂನ್ 29ಕ್ಕೆ ಮುಂದೂಡಿದೆ.
















