ಮನೆ ಕ್ರೀಡೆ ಅಜಿಂಕ್ಯ ರಹಾನೆ, ಇಶಾಂತ್‌ ಶರ್ಮಾಗೆ ಬಿಸಿಸಿಐ ಕೇಂದ್ರ ಒಪ್ಪಂದದಿಂದ ಕೊಕ್‌ ಸಾಧ್ಯತೆ

ಅಜಿಂಕ್ಯ ರಹಾನೆ, ಇಶಾಂತ್‌ ಶರ್ಮಾಗೆ ಬಿಸಿಸಿಐ ಕೇಂದ್ರ ಒಪ್ಪಂದದಿಂದ ಕೊಕ್‌ ಸಾಧ್ಯತೆ

0

ನವದೆಹಲಿ(Newdelhi): ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಅಜಿಂಕ್ಯ ರಹಾನೆ ಮತ್ತು ಇಶಾಂತ್‌ ಶರ್ಮ ಅವರನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದ್ದು, ಶುಭಮನ್‌ ಗಿಲ್‌ ಹಾಗೂ ಸೂರ್ಯಕುಮಾರ್ ಯಾದವ್‌ ಬಡ್ತಿ ಪಡೆಯುವ ನಿರೀಕ್ಷೆಯಿದೆ.

ಬಿಸಿಸಿಐ ತನ್ನ ಆಟಗಾರರ ಕೇಂದ್ರಿಯ ಗುತ್ತಿಗೆ ಪಟ್ಟಿಯನ್ನು ಡಿ.21 ರಂದು ನಡೆಯಲಿರುವ ಅಪೆಕ್ಸ್‌ ಸಮಿತಿ ಸಭೆಯಲ್ಲಿ ಪರಿಷ್ಕರಿಸಲಿದೆ.

ಸಭೆಯಲ್ಲಿ ಒಟ್ಟು 12 ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ನೂತನ ಕೇಂದ್ರೀಯ ಗುತ್ತಿಗೆ ಪಟ್ಟಿ ಬಿಡುಗಡೆ ಮಾಡುವುದು ಪ್ರಮುಖ ವಿಷಯ ಎನಿಸಿಕೊಂಡಿದೆ.

ಟಿ20 ಮಾದರಿಯಲ್ಲಿ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಹಾರ್ದಿಕ್‌ ಪಾಂಡ್ಯ ಅವರು ‘ಸಿ’ ಶ್ರೇಣಿಯಿಂದ ‘ಬಿ’ ಶ್ರೇಣಿಗೆ ಬಡ್ತಿ ಹೊಂದಬಹುದು. ವಿಕೆಟ್‌ಕೀಪರ್ ಬ್ಯಾಟರ್‌ ವೃದ್ಧಿಮನ್‌ ಸಹಾ ಅವರನ್ನೂ ಕೈಬಿಡುವ ಸಾಧ್ಯತೆಯಿದೆ.

ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪದ್ಧತಿ ನಾಲ್ಕು ಶ್ರೇಣಿಗಳನ್ನು ಒಳಗೊಂಡಿದೆ. ಪುರುಷರ ವಿಭಾಗದಲ್ಲಿ ಎ+ ಶ್ರೇಣಿಯಲ್ಲಿ ಸ್ಥಾನ ಪಡೆಯುವವರಿಗೆ ವಾರ್ಷಿಕ  7 ಕೋಟಿ, ‘ಎ’ ಶ್ರೇಣಿಗೆ  5 ಕೋಟಿ, ‘ಬಿ’ ಶ್ರೇಣಿಗೆ  3 ಕೋಟಿ ಮತ್ತು ‘ಸಿ’ ಶ್ರೇಣಿಗೆ  1 ಕೋಟಿ ನೀಡಲಾಗುತ್ತಿದೆ. ‘ಸೂರ್ಯ ಅವರು ಈಗ ‘ಸಿ’ ಶ್ರೇಣಿಯಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ತೋರಿದ ಪ್ರದರ್ಶನದಿಂದ ‘ಬಿ’ ಶ್ರೇಣಿಗೆ ಬಡ್ತಿ ಹೊಂದಬಹುದು ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಇಶಾನ್‌ ಕಿಶನ್‌ ಅವರು ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಹಿಂದಿನ ಲೇಖನಮಕ್ಕಳನ್ನು ಕಳೆದುಕೊಂಡು ಸಮಾಜ ಕಟ್ಟುವುದೇನಿದೆ?: ಕೆ.ನಾಗಣ್ಣ ಗೌಡ
ಮುಂದಿನ ಲೇಖನಸದನದಲ್ಲಿ ಯಾರೊಬ್ಬರ ಜಾತಿ, ಧರ್ಮ ಉಲ್ಲೇಖಿಸಿದರೆ ಕ್ರಮ: ಸ್ಪೀಕರ್ ಓಂ ಬಿರ್ಲಾ