ಮನೆ ಸುದ್ದಿ ಜಾಲ ಅಮಿತಾಭ್​ ಬಚ್ಚನ್ ರಿಂದ ವೈಭವ್ ಸೂರ್ಯವಂಶಿಗೆ ಶ್ಲಾಘನೆ

ಅಮಿತಾಭ್​ ಬಚ್ಚನ್ ರಿಂದ ವೈಭವ್ ಸೂರ್ಯವಂಶಿಗೆ ಶ್ಲಾಘನೆ

0

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಕ್ವಾಲಿಫೈಯರ್ 2ರಲ್ಲಿ ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿರುವುದು ಗೊತ್ತಿರುವ ವಿಷಯ. ಆದಾಗ್ಯೂ, ರಾಜಸ್ಥಾನ ಫೈನಲ್​ ತಲುಪಲೂ ಸಾಧ್ಯವಾಗದೇ ಇದ್ದರೂ ತಂಡದ ಉದಯೋನ್ಮುಖ ಆಟಗಾರ ವೈಭವ್​ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕವೇ ಎಲ್ಲರ ಮನ ಗೆದ್ದಿದ್ದಾರೆ. ಬಾಲಿವುಡ್​ ಸ್ಟಾರ್​ ಬಿಗ್​ಬಿ ಖ್ಯಾತಿಯ ಅಮಿತಾಬ್​ ಬಚ್ಚನ್​ ಸಹ ಫಿದಾ ಆಗಿದ್ದು ಡೇರಿಂಗ್​ ಆಂಡ್​ ಡ್ಯಾಶಿಂಗ್​ ವೈಭವ್​ ಕುರಿತು ಪ್ರಮುಖ ಹೇಳಿಕೆ ನೀಡಿದ್ದಾರೆ. ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ, ಶುಭಮನ್ ಗಿಲ್ ಅವರ ಶತಕ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ 18.4 ಓವರ್‌ಗಳಲ್ಲಿ 215 ರನ್‌ಗಳ ಬೃಹತ್ ಗುರಿಯನ್ನು ತಲುಪಿತು ಎನ್ನಲಾಗಿದೆ.

ಈ ಪಂದ್ಯ ರಾಜಸ್ಥಾನ ಸೋತರು ಬಿಹಾರ ಮೂಲದ 15 ವರ್ಷ ವಯಸ್ಸಿನ ಕ್ರಿಕೆಟರ್ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕವೇ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 2ರಲ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಘರ್ಜಿಸಿದರು. ಕೇವಲ 47 ಎಸೆತಗಳಲ್ಲಿ 96 ರನ್​ಗಳ ಆಕರ್ಷಕ ಇನ್ನಿಂಗ್ಸ್​ ಆಡಿದ್ದ ಅವರು ಕೇವಲ 4 ರನ್​ಗಳಿಂದ ಶತಕ ವಂಚಿತರಾದರು. ವೈಭವ್​ರ ಅದ್ಭುತ ಇನ್ನಿಂಗ್ಸ್​ ಹೊರತಾಗಿಯೂ ರಾಜಸ್ಥಾನ್ ತಂಡ ಫೈನಲ್‌ ತಲುಪಲು ಸಾಧ್ಯವಾಗಲಿಲ್ಲ. ತಂಡ ಸೋಲುತ್ತಿದ್ದಂತೆ ವೈಭವ್ ಭಾವುಕರಾಗಿದ್ದರು. ಆದಾಗ್ಯೂ ಮೈದಾನದಲ್ಲಿ ಅವರ ಭರ್ಜರಿ ಆಟ ಅಭಿಮಾನಿಗಳು, ಕ್ರಿಕೆಟ್ ಲೆಜೆಂಟ್ಸ್ ಮತ್ತು ಬಾಲಿವುಡ್ ಬಿಗ್​ಬಿ ಅಮಿತಾಭ್​​ ಬಚ್ಚನ್ ಅವರಿಂದಲೂ ಪ್ರಶಂಸೆ ಗಳಿಸಿತು.

ಹಾಗಾಗಿ ಈ ಸೀಸನ್​ನಲ್ಲಿ ಯುವ ಕ್ರಿಕೆಟಿಗನ ಗಮನಾರ್ಹ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಅಮಿತಾಭ್​​ ಬಚ್ಚನ್, ‘ಎಕ್ಸ್’ನಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಹಂಚಿಕೊಂಡರು. ಸೂರ್ಯವಂಶಿಯನ್ನು “ಅದ್ಭುತ” ಪ್ರತಿಭೆ ಎಂದು ಬಣ್ಣಿಸಿದ ಬಿಗ್​ಬಿ​​, ಹದಿಹರೆಯದವ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗೈದಿದ್ದಕ್ಕಾಗಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. “ಟಿ 5756(i) – ಸೂರ್ಯವಂಶಿ – 15 ವರ್ಷದ ಅದ್ಭುತ. ಆ ವಯಸ್ಸಿನಲ್ಲಿ, ನನಗೆ ಗೋಲಿ ಅಲ್ಲ ಗಿಲ್ಲಿ ದಾಂಡು ಸಹ ಆಡಲು ಬರುತ್ತಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ. ಇದಲ್ಲದೇ ತಂಡದ ನಾಯಕ ರಿಯಾನ್​ ಪರಾಗ್​ ಸಹಾ ವೈಭವ್​ ಆಟವನ್ನು ಗುಣಗಾನ ಮಾಡಿದ್ದಾರೆ ಎನ್ನಲಾಗಿದೆ.