ಮನೆ ಸುದ್ದಿ ಜಾಲ ವಕೀಲರ ಸಂಘದ ಆಗ್ರಹ : ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ

ವಕೀಲರ ಸಂಘದ ಆಗ್ರಹ : ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ

0

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಇಂದು ಬೃಹತ್ ಪ್ರತಿಭಟನಾ ಜಾಥಾ ನಡೆಸಿತು. ಶಿವಮೊಗ್ಗ ಜಿಲ್ಲಾ ಕೋರ್ಟ್ ಆವರಣದಿಂದ ಪ್ರಾರಂಭವಾದ ಪ್ರತಿಭಟನಾ ಜಾಥಾವು ಬಾಲರಾಜ್ ಅರಸ್ ರಸ್ತೆ ಮಹಾವೀರ ವೃತ್ತ, ಕುವೆಂಪು ರಂಗ ಮಂದಿರ ರಸ್ತೆ, ಬಸವೇಶ್ವರ ವೃತ್ತ, ಬಿ.ಹೆಚ್.ರಸ್ತೆಯ ಮೂಲಕ ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಟಿ.ಶೀನಪ್ಪ‌ಶೆಟ್ಟಿ ವೃತ್ತದ ಮೂಲಕ ಮಹಾವೀರ ರಸ್ತೆಯಿಂದ ಸಾಗಿ ಸರ್‌.ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿ ತೆರೆದ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಲಾಯಿತು ಎನ್ನಲಾಗುತ್ತಿದೆ.

ಈ ಕುರಿತ್ತಾಗಿ ವಕೀಲರ ಸಂಘದ ಜಾಥಾಕ್ಕೆ ಜಿಲ್ಲೆಯ ಎಲ್ಲಾ ತಾಲೂಕಿನ ವಕೀಲರ ಸಂಘ, ವರ್ತಕರ ಸಂಘ, ನಾಗರಿಕ ಹಿತರಕ್ಷಣ ವೇದಿಕೆ. ರಾಷ್ಟ್ರ ಭಕ್ತರ ಬಳಗ, ದಲಿತ ಸಂಘಟನೆಗಳು, ಜೆಸಿಐ ಸೇರಿದಂತೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಯವರು ಪಕ್ಷಾತೀತವಾಗಿ ಬೆಂಬಲ ನೀಡಿ, ಭಾಗವಹಿಸಿದ್ದರು. ಮಂಗಳೂರಿನಲ್ಲಿಯು ಸಹ ಹೈಕೋರ್ಟ್ ಪೀಠಕ್ಕೆ ಹೋರಾಟ ನಡೆಸಲಾಗುತ್ತಿದೆ. ಮಂಗಳೂರಿನವರು ತಮ್ಮ ಮನವಿಯಲ್ಲಿ ಮಂಗಳೂರು, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಸೇರ್ಪಡೆ ಮಾಡಿಕೊಂಡಿದ್ದರು. ಇದಕ್ಕೆ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ವಿರೋಧ ಮಾಡಿದ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆ ಕೈಬಿಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಕೇವಲ 100 ಕಿ.ಮೀ ಅಂತರದಲ್ಲಿದೆ.‌ ಮಂಗಳೂರು ಜಿಲ್ಲೆಗಿಂತ ಶಿವಮೊಗ್ಗ ಜಿಲ್ಲೆ ಹೆಚ್ಚು ಅನುಕೂಲಕರವಾಗಿದೆ. ಇದರಿಂದ ಶಿವಮೊಗ್ಗದಲ್ಲಿಯೇ ಸಂಚಾರ ನ್ಯಾಯಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು. ಶಿವಮೊಗ್ಗ ಬಸವಕೇಂದ್ರದ ಮರುಳ ಬಸವಸಿದ್ದ ಸ್ವಾಮೀಜಿ ಮಾತನಾಡಿ, ನಮಗೆ ಬೇಕಾಗಿರುವುದು ಎಲ್ಲರ ಹಿತದೃಷ್ಟಿ. ಶಿವಮೊಗ್ಗಕ್ಕೆ ವಿಮಾನ ನಿಲ್ದಾಣದ ಸಂಪರ್ಕ, ರೈಲ್ವೆ ಸಂಪರ್ಕ ಹಾಗೂ ಎಲ್ಲಾ ಜಿಲ್ಲೆಗಳಿಂದ ರಸ್ತೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿದೆ. ಜನತೆಗೆ ಮಂಗಳೂರಿಗಿಂತ ಶಿವಮೊಗ್ಗದಲ್ಲಿ ಸಂಚಾರಿ ಪೀಠವಾದ್ರೆ ಹೆಚ್ಚು ಅನುಕೂಲವಿದೆ.

ಇದರಿಂದ ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ನೀಡಿ ಎಂದು ಕೇಳಬೇಕಾಗುತ್ತದೆ. ಇದರಿಂದ ಈ ಹೋರಾಟ ಇನ್ನಷ್ಟು ಹೆಚ್ಚಿಗೆ ಮಾಡಬೇಕಿದೆ. ಅಲ್ಲದೇ ಹೈಕೋರ್ಟ್ ಪೀಠಕ್ಕೆ ಬೇಕಾದ ಪ್ರಕರಣ ಸಂಖ್ಯೆ ಸಹ ಜಿಲ್ಲೆಯಲ್ಲಿದೆ. ಇದೇ ರೀತಿಯ ಹೋರಾಟ ಇನ್ನಷ್ಟು ಮಾಡಬೇಕಿದೆ, ಇದಕ್ಕೆ ಎಲ್ಲರೂ ಕೈ ಜೋಡಿಬೇಕಿದೆ ಎಂದರು. ಮಧ್ಯ ಕರ್ನಾಟಕಕ್ಕೆ ಹೈಕೋರ್ಟ್ ಸಂಚಾರ ಪೀಠ ಯಾಕೆ ಬೇಕು ಎಂಬುದರ ಕುರಿತು ಜಿಲ್ಲಾ ವಕೀಲರ ಸಂಘದ ಗೌರವಧ್ಯಕ್ಷ ಬಸಪ್ಪ ಗೌಡ ಮಾತನಾಡಿ, ಮಧ್ಯ ಕರ್ನಾಟಕದಲ್ಲಿನ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿವೆ. ಈ ಎಲ್ಲ ಜಿಲ್ಲೆಗಳಿಂದ ಶಿವಮೊಗ್ಗ ಜಿಲ್ಲೆ ಕೇವಲ 100 ರಿಂದ 120 ಕಿ.ಮಿ ದೂರ ಇದೆ. ಇದರಿಂದ ಶಿವಮೊಗ್ಗದಲ್ಲಿ ಸಂಚಾರಿ ಪೀಠ ಸ್ಥಾಪನೆಯಾದರೆ, ಎಲ್ಲರಿಗೂ ತ್ವರಿತ ನ್ಯಾಯ ಸಿಗುವಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು. ಕಿತ್ತೂರು , ಕಲ್ಯಾಣ ಕರ್ನಾಟಕದ ನಂತರ ಮಧ್ಯ ಕರ್ನಾಟಕದ ಸರಣಿ ಆರಂಭವಾಗಿದೆ. ಕರಾವಳಿ ಭಾಗದ ಮಂಗಳೂರು ಹಾಗೂ ಉಡುಪಿ ಎರಡು ಜಿಲ್ಲೆಗೆ ಸಂಚಾರಿ ಪೀಠ ಪ್ರಸ್ತಾವನೆ ಮಾಡಿರುವುದು ಸರಿ ಅಲ್ಲ. ಇದರಿಂದ ಮಂಗಳೂರಿನ ನ್ಯಾಯಪೀಠದ ಹೋರಾಟ ಮನಗಂಡು ಮಂಗಳೂರಿನ ಪ್ರಸ್ತಾವನೆ ರದ್ದು ಮಾಡಿ, ಹೊಸ ಪ್ರಸ್ತಾವನೆಯನ್ನು ಪಡೆದು ಮಧ್ಯ ಕರ್ನಾಟಕಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.