ಯುವ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಭರ್ಜರಿ ಎಂಟ್ರಿ ಕೊಟ್ಟ ಯುವ ರಾಜ್ಕುಮಾರ್ ‘ಎಕ್ಕ’ ಚಿತ್ರದ ಮೂಲಕ ಮಾಸ್ ಹೀರೋ ಆಗಿಯೂ ಸಿನಿಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಿನಿಮಾ ಸಕ್ಸಸ್ ಬಳಿಕ ಯುವ ಯಾವ ಸಿನಿಮಾ ಕೈಗೆತ್ತಿಕೊಂಡಿದ್ದಾರೆ? ಮುಂದಿನ ಸಿನಿಮಾಗಳ್ಯಾವುವು? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಆದ್ರೆ ಯುವ ಮಾತ್ರ ಕಂಪ್ಲೀಟ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಹೌದು, ದೊಡ್ಮನೆ ಕುಡಿ ಕೇದಾರನಾಥ ಯಾತ್ರೆ ಮುಗಿಸಿಕೊಂಡು ಬಂದಿದ್ದಾರೆ.ನ ಯುವ ಆಪ್ತರು ಹೇಳುವ ಹಾಗೇ ಮುಂದಿನ ಸಿನಿಮಾಗೆ ಸಂಬಂಧಿಸಿದಂತೆ ಕಥೆಗಳ ಮಾತುಕತೆ ನಡೆಯುತ್ತಿದೆ. ಈ ಮಧ್ಯೆ ನಟ ಕೆಲ ಗೆಳೆಯರ ಜೊತೆ 5 ದಿನಗಳ ಕೇದಾರನಾಥ ಯಾತ್ರೆ ಕೈಗೊಂಡಿದ್ರು. ದೇವಸ್ಥಾನದ ಎದುರು ಕನ್ನಡ ಬಾವುಟ ಹಿಡಿದು ನಿಂತಿರುವ ಫೋಟೋ ವ್ಯಾಪಕವಾಗಿ ಗಮನ ಸೆಳೆಯುತ್ತಿದೆ. ಈ ಆಧ್ಯಾತ್ಮಿಕ ಯಾತ್ರೆಯ ಅನುಭವವನ್ನು ಯುವ ರಾಜ್ಕುಮಾರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಸಹಿತ ಹಂಚಿಕೊಂಡಿದ್ದಾರೆ. ‘ಕೇದಾರನಾಥ ಯಾತ್ರೆಯಲ್ಲಿ ನಾನು ಕಲಿತಿದ್ದೇನು? ಎಂದು ನಾನು ನನ್ನನ್ನು ಕೇಳಿಕೊಂಡಾಗ…’ ಎಂದು ಯುವ ರಾಜ್ಕುಮಾರ್ ಪೋಸ್ಟ್ ಪ್ರಾರಂಭಿಸಿದ್ದಾರೆ. ನಾನಿದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದೆ ಮತ್ತು ಅದು ಸಂಪೂರ್ಣವಾಗಿ ಅರ್ಥಪೂರ್ಣವಾಗಿತ್ತುಎನ್ನಲಾಗಿದೆ.
ಹಾಗೇ ನದಿ ತೀರ ನಮಗೆ ನೋವು, ಒತ್ತಡ ಎಲ್ಲವನ್ನೂ ಬಿಟ್ಟು ಆರಾಮವಾಗಿ ಇರೋದನ್ನು ಕಲಿಸುತ್ತದೆ. ಪರ್ವತಗಳು ನೋವನ್ನು ಸಹಿಸಿಕೊಂಡೇ ಶಾಂತವಾಗಿರೋದನ್ನು ಕಲಿಸುತ್ತವೆ. ಕೇದಾರನಾಥ ಯಾತ್ರೆಯಲ್ಲಿ ಆ ಮಾತಿನ ಅರ್ಥ ನನಗೆ ನಿಜವಾಗಿಯೂ ಗೊತ್ತಾಯಿತು. ಈ ಸಂಪೂರ್ಣ ಪ್ರಯಾಣದಲ್ಲಿ ಹರ ಹರ ಮಹಾದೇವ ಅನ್ನೋ ಘೋಷಣೆ ಇತ್ತು. ಜನರಲ್ಲಿ, ಪ್ರಾಣಿಗಳಲ್ಲಿ, ಪ್ರಕೃತಿಯಲ್ಲಿ, ಗಾಳಿಯಲ್ಲಿ. ಮುಖ್ಯವಾಗಿ ನನ್ನ ದೇಹದ ಪ್ರತಿಯೊಂದು ಭಾಗದಲ್ಲೂ. ಬೇಸ್ ಕ್ಯಾಂಪ್‌ನಿಂದ ಆ ಕೊನೆಯ ನಡೆ ಮುಗಿಸಿ ಕೇದಾರನಾಥ ದೇವಾಲಯದ ಮುಂದೆ ನಿಂತ ಕ್ಷಣ. ಎಲ್ಲವೂ ನಿಂತ ಹಾಗಾಯಿತು. ಆ ಕ್ಷಣದಲ್ಲಿ ನಾನು. ಕೇವಲ ಆ ಕ್ಷಣದಲ್ಲಷ್ಟೇ ಇದ್ದೆ. ನಿನ್ನೆ ಇರಲಿಲ್ಲ. ನಾಳೆ ಇರಲಿಲ್ಲ. ಇದ್ದಿದ್ದು ಈ ದಿನ, ಈ ಕ್ಷಣ ಮಾತ್ರ. ನಿಜವಾಗಿಯೂ ದೇವರ ಸಾನಿಧ್ಯದಲ್ಲಿದ್ದೇವೆ ಅನ್ನೋ ಭಾವನೆ ಬಂದಾಗ, ಏನನ್ನೂ ಕೇಳಬೇಕು ಅನ್ನಿಸೋದಿಲ್ಲ. ಏನನ್ನೂ ಬೇಡಬೇಕು ಅನ್ನಿಸೋದಿಲ್ಲ. ಅವರು ಇದ್ದಾರೆ ಅನ್ನೋ ಭರವಸೆ ಸಾಕು. ನನ್ನನ್ನು ಇಲ್ಲಿಯವರೆಗೆ ತಂದ ಪ್ರತೀ ಹೆಜ್ಜೆ, ನಿರ್ಧಾರ, ತಪ್ಪು, ಸರಿಯಾದ ಕೆಲಸ, ಕಲಿತದ್ದು, ಕಲಿಯದೇ ಉಳಿದದ್ದು, ಒಳ್ಳೆಯದು, ಕೆಟ್ಟದ್ದು… ಎಲ್ಲವೂ ಸೇರಿ ನನ್ನನ್ನು ಈ ಜಾಗಕ್ಕೆ ಕರೆ ತಂದಿವೆ. ಆದರಿಂದ ಇಂದು ನಾನು ಅವರ ಸಾನಿಧ್ಯದಲ್ಲಿ ನಿಂತಿದ್ದೇನೆ. ನಾನು ಇರಬೇಕಾದ ಜಾಗದಲ್ಲೇ ಇದ್ದೇನೆ. ನನ್ನನ್ನು ಇಲ್ಲಿವರೆಗೆ ತಂದಿದ್ದರೆ, ನಾನು ಮಾಡಿದ ಪ್ರತಿಯೊಂದನ್ನೂ ಮತ್ತೆ ಮಾಡುತ್ತೇನೆ. ಹೆಮ್ಮೆಯಿಂದ ಮಾಡುತ್ತೇನೆ. ಏಕಂದ್ರೆ ಎಲ್ಲವೂ ಅವರೇ. ಹರ ಹರ ಮಹಾದೇವ ಎಂದು ತಿಳಿಸಿದ್ದಾರೆ.

















