ತುಮಕೂರು (ಮೇ.12):ತುಮಕೂರು ಮದರಸಾದಲ್ಲಿ ಮೌಲ್ವಿಯಿಂದ ನಿರಂತರ ಕಿರುಕುಳಕ್ಕೆ ಹೆದರಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ 24 ಮಕ್ಕಳು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಘಟನೆಯ ಮಾಹಿತಿ ಪಡೆದ ರೈಲ್ವೆ ಪೊಲೀಸರೇ ಶಾಕ್ ಆಗಿದ್ದು ತುಮಕೂರಿನ ಮದರಸಾದಲ್ಲಿ ನಡೆದ ಈ ಘಟನೆಯಿಂದ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಬಿಹಾರ ಮೂಲದ 24 ಮಕ್ಕಳು ತುಮಕೂರಿನ ಅಮ್ಲಾಪುರದಲ್ಲಿರುವ ಜಾಮಿಯಾ ಅರೇಬಿಯಾ ಹಸೀನಿಯಾ ಟ್ರಸ್ಟ್ ಮದರಸಾದಲ್ಲಿ ಓದಲು ಇದ್ದರು. ಆದರೆ ಅಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ ಮೌಲ್ವಿಯ ಕಿರುಕುಳ ತಾಳಲಾರದೆ ಒಂದಲ್ಲ ಎರಡಲ್ಲ ಬರೊಬ್ಬರಿ ಇಪ್ಪತ್ನಾಲ್ಕು ಮಕ್ಕಳು ರಾತ್ರಿ ವೇಳೆ ಮದರಸಾದಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮದರಸಾದಿಂದ ತಪ್ಪಿಸಿಕೊಂಡ ಆ ಮಕ್ಕಳು ಬಳಿಕ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಕ್ಕಳನ್ನು ಗಮನಿಸಿದ ರೈಲ್ವೇ ರಕ್ಷಣಾ ದಳ ವಿಚಾರಿಸಿದಾಗ ಬೆಚ್ಚಿಬೀಳಿಸುವ ಸಂಗತಿಗಳು ಹೊರಬಂದಿವೆ. ಮದರಸಾದ ಮೌಲ್ವಿ ಮೌಲಾಲಿ ಎಂಥ ಕ್ರೂರನೆಂದರೆ ಓದಲು ಬಂದ ಮಕ್ಕಳಿಂದ ಕಲ್ಲು ಹೊರೆಸಿಸುತ್ತಿದ್ದನೆಂದು ಮಕ್ಕಳು ಆರೋಪಿಸಿದ್ದಾರೆ. ದಿನಾ ಕಲ್ಲು ಮಣ್ಣು ಹೊರಿಸುತ್ತಿದ್ದರು. ಕೆಲಸ ಮಾಡಲು ಆಗೋದಿಲ್ಲ ಎಂದರೆ ಹಿಗ್ಗಾಮುಗ್ಗಾ ಥಳಿಸಿ ಹಿಂಸೆ ನೀಡುತ್ತಿದ್ದನಂತೆ ಮೌಲ್ವಿ. ಇದಕ್ಕಿಂತಲೂ ಶಾಕಿಂಗ್ ಅಂದ್ರೆ, ಕೆಲವೊಮ್ಮೆ ಮಕ್ಕಳಿಗೆ ಸರಿಯಾಗಿ ಊಟ ಕೂಡ ಕೊಡುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆದರಿಂದ ದೈಹಿಕ ಹಿಂಸೆ, ಕಿರುಕುಳ, ಬಲವಂತದ ಕೆಲಸಗಳಿಂದ ಬೇಸತ್ತ ಮಕ್ಕಳು ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ ಎನ್ನಲಾಗಿದೆ. ಈ ವಿಚಾರ ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ಬಂದ ಬಳಿಕ ಪ್ರಕರಣ ತುಮಕೂರಿಗೆ ವರ್ಗಾವಣೆಯಾಗಿದೆ. ಇದೀಗ ಮೌಲ್ವಿ ಮೌಲಾಲಿ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗುತ್ತಿದೆ.

















