ಮನೆ ಕ್ರೀಡೆ ಅದ್ಭುತ ಕ್ಯಾಚ್ ಹಿಡಿದ ಅಶ್ವಿನ್: ದಿಂಡಿಗಲ್ ಡ್ರಾಗನ್ಸ್ ತಂಡಕ್ಕೆ 1 ರನ್ ​ಗಳ ರೋಚಕ ಗೆಲುವು

ಅದ್ಭುತ ಕ್ಯಾಚ್ ಹಿಡಿದ ಅಶ್ವಿನ್: ದಿಂಡಿಗಲ್ ಡ್ರಾಗನ್ಸ್ ತಂಡಕ್ಕೆ 1 ರನ್ ​ಗಳ ರೋಚಕ ಗೆಲುವು

0

ಇಂಗ್ಲೆಂಡ್‌ ನಿಂದ ಹಿಂದಿರುಗಿದ ಅಶ್ವಿನ್  ತಮಿಳುನಾಡು ಪ್ರೀಮಿಯರ್ ಲೀಗ್‌ ನಲ್ಲಿ  ದಿಂಡಿಗಲ್ ಡ್ರಾಗನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಚೆಪಾಕ್ ಸೂಪರ್ ಗಿಲ್ಲಿಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದ ಅಶ್ವಿನ್ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದ್ದಾರೆ.

Join Our Whatsapp Group

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ 9 ವಿಕೆಟ್ ಕಳೆದುಕೊಂಡು 170 ರನ್ ಕಲೆ ಹಾಕಿತ್ತು. ಇದರ ನಂತರ 171 ರನ್​ ಗಳ ಗುರಿ ಬೆನ್ನಟ್ಟಿದ ಚೆಪಾಕ್ ಪಂದ್ಯದಲ್ಲಿ ಗೆಲುವು ಸಾಧಿಸಲು ಹೋರಾಡಿತ್ತಾದರೂ, ಒಂದು ರನ್ ​ನಿಂದ ಸೋಲೊಪ್ಪಿಕೊಂಡಿತು. ಸಂಪೂರ್ಣ 20 ಓವರ್‌ಗಳನ್ನು ಆಡಿದ ಈ ತಂಡವು ಒಂಬತ್ತು ವಿಕೆಟ್‌ ಗಳನ್ನು ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು.

ಚೆಪಾಕ್ ಇನ್ನಿಂಗ್ಸ್‌ ನ 14ನೇ ಓವರ್ ನಡೆಯುತ್ತಿತ್ತು. ದಿಂಡುಗಲ್ ಪರ ವರುಣ್ ಚಕ್ರವರ್ತಿ ಬೌಲಿಂಗ್ ಮಾಡುತ್ತಿದ್ದರು. ಬ್ಯಾಟ್ಸ್​ಮನ್ ಸಂಜಯ್ ಯಾದವ್, ವರುಣ್ ಎಸೆದ ಮೊದಲ ಎಸೆತವನ್ನು ಡೀಪ್ ಮಿಡ್‌ವಿಕೆಟ್‌ ಮೇಲೆ ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್‌ ನ ಅಂಚನ್ನು ತಾಗಿ ಗಾಳಿಯಲ್ಲಿ ಮೇಲಕ್ಕೆ ಹೋಯಿತು. ಅಶ್ವಿನ್ ಶಾರ್ಟ್ ಮಿಡ್‌ ವಿಕೆಟ್‌ ನಿಂದ ಮಿಡ್ ಆನ್‌ ಗೆ ಓಡಿ, ಡೈವ್ ಮಾಡಿ ಅತ್ಯುತ್ತಮ ಕ್ಯಾಚ್ ತೆಗೆದುಕೊಂಡರು. ಇದು ಚೆಪಾಕ್‌ ತಂಡದ ನಾಲ್ಕನೇ ವಿಕೆಟ್ ಆಗಿದ್ದು, ಸಂಜಯ್ ಕೇವಲ ನಾಲ್ಕು ಎಸೆತಗಳಲ್ಲಿ ಮೂರು ರನ್ ಗಳಿಸಿದರು. ಒಟ್ಟು 102 ರನ್ ಗಳಿಸಿದ್ದಾಗ ಸಂಜಯ್ ವಿಕೆಟ್ ಪತನವಾಯಿತು.

ಇನ್ನು ಚೆಪಾಕ್‌ ತಂಡದ ಪರ ಏಕಾಂಗಿ ಹೋರಾಟ ಮಾಡಿದ ಬಾಬಾ ಅಪರಾಜಿತ್ ಅರ್ಧಶತಕ ಸಿಡಿಸಿದರು. ಆದರೆ ಅವರ ಇನ್ನಿಂಗ್ಸ್​ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. 40 ಎಸೆತಗಳನ್ನು ಎದುರಿಸಿದ ಅವರು ಏಳು ಸಿಕ್ಸರ್ ಹಾಗೂ ಎರಡು ಬೌಂಡರಿಗಳ ನೆರವಿನಿಂದ 74 ರನ್ ಕಲೆಹಾಕಿದರು. ಈ ತಂಡದ ನಾಯಕ ನಾರಾಯಣ ಜಗದೀಶ್‌ 36 ಎಸೆತಗಳಲ್ಲಿ 37 ರನ್‌ ಗಳ ಇನಿಂಗ್ಸ್‌ ಆಡಿದರು.

ಕೊನೆಯ ಓವರ್‌ ನಲ್ಲಿ ಚೆಪಾಕ್‌ ಗೆ 12 ರನ್‌ಗಳ ಅಗತ್ಯವಿತ್ತು. ರೋಹಿತ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ ಮುಂದಿನ ಎಸೆತದಲ್ಲಿ ರೋಹಿತ್ ಔಟಾದರು. ಆ ಬಳಿಕ ಮೂರನೇ ಎಸೆತದಲ್ಲಿ ಲೋಕೇಶ್ ರಾಜ್ ಬೌಂಡರಿ ಬಾರಿಸಿದರು. ನಂತರ ನಾಲ್ಕನೇ ಎಸೆತದಲ್ಲಿ ಸಿಂಗಲ್ ಬಂದಿತು. ಐದನೇ ಎಸೆತದಲ್ಲಿ ಸಸಿದೇವ್ ಔಟಾದರೆ, ಕೊನೆಯ ಎಸೆತದಲ್ಲಿ ರಹೀಸ್ ಶಾ ಔಟಾದರು. ಈ ಮೂಲಕ ಚೆಪಾಕ್‌ ತಂಡ 1 ರನ್ ​ಗಳ ರೋಚಕ ಸೋಲನುಭವಿಸಿತು.

ಈ ಮೊದಲು ಬ್ಯಾಟ್ ಮಾಡಿದ ದಿಂಡುಗಲ್, ಆದಿತ್ಯ ಗಣೇಶ್ ಅವರ 44 ಮತ್ತು ಸುಬೋಧ್ ಭಾಟಿ ಅವರ 31 ರನ್‌ಗಳ ಆಧಾರದ ಮೇಲೆ ಉತ್ತಮ ಸ್ಕೋರ್ ಗಳಿಸಿತು. ಆದರೆ ತಂಡದ ನಾಯಕ ಅಶ್ವಿನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಶ್ವಿನ್ ಬ್ಯಾಟಿಂಗ್​ ನಲ್ಲಿ ಆರು ಎಸೆತಗಳಲ್ಲಿ ಒಂದು ರನ್ ಗಳಿಸಿ ಔಟಾದರೆ, ಬೌಲಿಂಗ್‌ ನಲ್ಲಿ ನಾಲ್ಕು ಓವರ್‌ ಗಳನ್ನು ಬೌಲ್ ಮಾಡಿ ಬರೋಬ್ಬರಿ 36 ರನ್ ನೀಡಿದರು.

ಹಿಂದಿನ ಲೇಖನಮೈಸೂರಿನಲ್ಲಿ ಜೋಡಿ ಕೊಲೆ
ಮುಂದಿನ ಲೇಖನಇ–ಸ್ವತ್ತು ನೀಡಲು 1 ಲಕ್ಷ ಲಂಚ: ನಗರಸಭೆಯ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ