ಮನೆ ಕ್ರೀಡೆ ಏಷ್ಯಾ ಕಪ್‌ ಟೂರ್ನಿ: ಅತಿ ಹೆಚ್ಚು ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ರವೀಂದ್ರ ಜಡೇಜಾ...

ಏಷ್ಯಾ ಕಪ್‌ ಟೂರ್ನಿ: ಅತಿ ಹೆಚ್ಚು ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ರವೀಂದ್ರ ಜಡೇಜಾ  

0

ದುಬೈ (Dubai): ಏಷ್ಯಾ ಕಪ್‌ ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಆಲ್‌ರೌಂಡರ್‌ ರವೀಂದ್ರ ಜಡೇಜಾ ಭಾಜನರಾಗಿದ್ದಾರೆ. ಆ ಮೂಲಕ ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಏಷ್ಯಾ ಕಪ್‌ ಟೂರ್ನಿಯ ಗ್ರೂಪ್‌ ‘ಎ’ ಪಂದ್ಯದಲ್ಲಿ ಹಾಂಕಾಂಗ್‌ ವಿರುದ್ಧ ರವೀಂದ್ರ ಜಡೇಜಾ ಒಂದು ವಿಕೆಟ್‌ ಪಡೆಯುವ ಮೂಲಕ ಈ ವಿಶೇಷ ದಾಖಲೆಯನ್ನು ಬರೆದರು. ಈ ಪಂದ್ಯದಲ್ಲಿ ಭಾರತ ತಂಡ 40 ರನ್‌ ಗಳಿಂದ ಗೆದ್ದು ಸೂಪರ್‌ 4ಕ್ಕೆ ಪ್ರವೇಶ ಮಾಡಿತು.

2010ರ ಏಷ್ಯಾ ಕಪ್‌ ಟೂರ್ನಿಯಲ್ಲಿ 4 ವಿಕೆಟ್‌ ಪಡೆದಿದ್ದ ರವೀಂದ್ರ ಜಡೇಜಾ, ಬಳಿಕ 2012ರ ಟೂರ್ನಿಯಲ್ಲಿ ಒಂದೇ ಒಂದು ವಿಕೆಟ್‌ ಕಿತ್ತಿದ್ದರು. ಇದಾದ ಬಳಿಕ 2014ರ ಅವೃತ್ತಿಯಲ್ಲಿ 7 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಇನ್ನು 2016ರ ಏಷ್ಯಾ ಕಪ್‌ ಟೂರ್ನಿಯಲ್ಲಿ 3 ಹಾಗೂ 2018ರ ಟೂರ್ನಿಯಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ್ದರು.

30 ವಿಕೆಟ್‌ಗಳನ್ನು ಪಡೆದಿರುವ ಶ್ರೀಲಂಕಾ ಸ್ಪಿನ್‌ ದಿಗ್ಗಜ ಮುತ್ತಯ್ಯ ಮುರಳಿಧರನ್ ಅವರು ಏಷ್ಯಾ ಕಪ್‌ ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ. ಕ್ರಮವಾಗಿ ಎರಡನೇ ಸ್ಥಾನದಲ್ಲಿ ಲಸಿತ್‌ ಮಾಲಿಂಗ(29), ಮೂರನೇ ಸ್ಥಾನದಲ್ಲಿ ಅಜಂತಾ ಮೆಂಡಿಸ್‌(26) ಹಾಗೂ ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನದ ಸಹೀದ್ ಅಜ್ಮಲ್‌(25) ಇದ್ದಾರೆ. ಈ ಸಾಲಿನಲ್ಲಿ ರವೀಂದ್ರ ಜಡೇಜಾ 23 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ನಿನ್ನೆ ಹಾಂಕಾಂಗ್‌ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಸೆ.4 ರಂದು ಭಾರತ ತಂಡ ಸೂಪರ್‌-4ರ ಹಂತದಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಮೊದಲನೇ ಪಂದ್ಯವಾಡಲಿದೆ.

ಹಿಂದಿನ ಲೇಖನಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಮುಂದಿನ ಲೇಖನಮುರುಘಾ ಮಠ ಪ್ರಕರಣ: ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್‌ ಗೆ ಜಾಮೀನು ಮಂಜೂರು