ಮನೆ ಸುದ್ದಿ ಜಾಲ ಪ್ರೀತಿಸಿ ಮದುವೆಯಾದ ಪತಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಪತ್ನಿ : ಗದಗ

ಪ್ರೀತಿಸಿ ಮದುವೆಯಾದ ಪತಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಪತ್ನಿ : ಗದಗ

0

ಗದಗ: ಜಿಲ್ಲೆಯ ನರಗುಂದ ತಾಲ್ಲೂಕಿನ ರಡ್ಡೇರ ನಾಗನೂರು ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಡ್ ರೂಂನಲ್ಲೇ ಗಂಡನ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಪತ್ನಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ವಿಶ್ವನಾಥ ಹಾದಿಮನಿ (29) ಕೊಲೆಯಾದ ದುರ್ದೈವಿಯಾಗಿದ್ದು. ಪತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪತ್ನಿ ಕವಿತಾಳನ್ನು ನರಗುಂದ ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ವಿಶ್ವನಾಥ್ ಮತ್ತು ಕವಿತಾ ಕಳೆದ 2022 ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಪ್ರೇಮ ವಿವಾಹವಾಗಿದ್ದರೂ ಸಹ, ಮದುವೆಯಾದ ಆರಂಭದ ದಿನಗಳಿಂದಲೇ ಇಬ್ಬರ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಮನಸ್ತಾಪಗಳು ಶುರುವಾಗಿದ್ದವು. ದಂಪತಿಗಳ ನಡುವಿನ ವೈಮನಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು ಎನ್ನಲಾಗಿದೆ. ಇದೇ ಕೌಟುಂಬಿಕ ಜಗಳದ ಕಾರಣದಿಂದಾಗಿ ಪತ್ನಿ ಕವಿತಾ ತನ್ನ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದಳು. ಇತ್ತೀಚೆಗಷ್ಟೇ ಹಿರಿಯರು ಸಂಧಾನ ನಡೆಸಿ, ಇಬ್ಬರನ್ನೂ ಒಂದು ಮಾಡಿದ್ದರು. ಅದರಂತೆ ಕೇವಲ 15 ದಿನಗಳ ಹಿಂದಷ್ಟೇ ಕವಿತಾ ತನ್ನ ಗಂಡನ ಮನೆಗೆ ಮರಳಿ ಬಂದಿದ್ದಳು. ಆದರೆ, ಮನೆಗೆ ಬಂದ ಮೇಲೂ ಇಬ್ಬರ ನಡುವಿನ ದಾಂಪತ್ಯ ಕಲಹ ಮಾತ್ರ ಮುಗಿದಿರಲಿಲ್ಲ ಎನ್ನಲಾಗುತ್ತಿದೆ.

ಆದರೆ ಬುಧವಾರ ರಾತ್ರಿಯೂ ಸಹ ಪತಿ-ಪತ್ನಿಯ ನಡುವೆ ತೀವ್ರ ಸ್ವರೂಪದ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ತೀವ್ರ ಆಕ್ರೋಶಗೊಂಡ ಕವಿತಾ, ಪತಿ ವಿಶ್ವನಾಥ್ ಮಲಗುವ ಕೋಣೆಯಲ್ಲಿದ್ದಾಗ ಮನೆಯಲ್ಲಿದ್ದ ಕಬ್ಬಿಣದ ಸಲಾಕೆಯನ್ನು ತಂದು ಆತನ ತಲೆ ಹಾಗೂ ದೇಹದ ಭಾಗಕ್ಕೆ ಜೋರಾಗಿ ಹೊಡೆದಿದ್ದಾಳೆ. ಪತ್ನಿಯ ಭೀಕರ ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವಗೊಂಡು ವಿಶ್ವನಾಥ್ ಬೆಡ್ ರೂಂ ನಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನರಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ರಡ್ಡೇರ ನಾಗನೂರು ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆ ಕೃತ್ಯ ಎಸಗಿದ ಪತ್ನಿ ಕವಿತಾಳನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬುದಾಗಿದೆ.