ಮನೆ ಸುದ್ದಿ ಜಾಲ ನಕಲಿ ನೋಟುಗಳನ್ನು ನೀಡಿ ಆರ್‌ಬಿಐಗೇ, ಟೋಪಿ ಹಾಕಲು ಹೋಗಿ ಸಿಕ್ಕಿಬಿದ್ದ ಭೂಪ

ನಕಲಿ ನೋಟುಗಳನ್ನು ನೀಡಿ ಆರ್‌ಬಿಐಗೇ, ಟೋಪಿ ಹಾಕಲು ಹೋಗಿ ಸಿಕ್ಕಿಬಿದ್ದ ಭೂಪ

0

ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಯಲ್ಲಿ ಚಲಾವಣೆ ರದ್ದಾಗಿರುವ 2,000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಬದಲಾಯಿಸಲು ಯತ್ನಿಸಿದ 52 ವರ್ಷದ ವ್ಯಕ್ತಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. 2 ಸಾವಿರ ಮುಖಬೆಲೆಯ 300ಕ್ಕೂ ಹೆಚ್ಚು ನೋಟುಗಳನ್ನು ತಂದಿದ್ದ ವ್ಯಕ್ತಿ, 7 ಲಕ್ಷ ರೂ.ಗೂ ಹೆಚ್ಚು ಮೊತ್ತವನ್ನು ಜಮಾ ಮಾಡುವಂತೆ ಕೇಳಿದ್ದ ಎನ್ನಲಾಗಿದೆ.

ನಾಗಶೆಟ್ಟಿಹಳ್ಳಿಯ ನಿವಾಸಿ ಎಸ್.ವಿ. ರಮೇಶ್ ಬಂಧಿತ ಆರೋಪಿ. ಈತ ಏಪ್ರಿಲ್ 9ರಂದು ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಕಚೇರಿಗೆ ಭೇಟಿ ನೀಡಿ, ತನ್ನ ಬಳಿಯಿದ್ದ 375 ನೋಟುಗಳನ್ನು ನೀಡಿ ಒಟ್ಟು 7.5 ಲಕ್ಷ ರೂಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಿದ್ದ. ಆದರೆ, ಅಧಿಕಾರಿಗಳು ನೋಟುಗಳನ್ನು ತಪಾಸಣೆ ನಡೆಸಿದಾಗ ಅವುಗಳು ನಕಲಿ ಎಂದು ತಿಳಿದುಬಂದಿದೆ.

ಆರ್‌ಬಿಐ ಸಹಾಯಕ ಜನರಲ್ ಮ್ಯಾನೇಜರ್ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗೆ ಈ ನಕಲಿ ನೋಟುಗಳನ್ನು ಪೂರೈಸಿದವರು ಯಾರು ಮತ್ತು ಇವುಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

2023ರಲ್ಲಿ ಆರ್‌ಬಿಐ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದರೂ, ಸಾರ್ವಜನಿಕರಿಗೆ ಆರ್‌ಬಿಐ ಕಚೇರಿಗಳಲ್ಲಿ ಇವುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಬ್ಬ ವ್ಯಕ್ತಿ ಏಕಕಾಲಕ್ಕೆ ಗರಿಷ್ಠ 20,000 ರೂ. ಮೌಲ್ಯದ ನೋಟುಗಳನ್ನು ಮಾತ್ರ ಬದಲಾಯಿಸಬಹುದು. ಆದರೆ ರಮೇಶ್ ಅತಿ ದೊಡ್ಡ ಮೊತ್ತದ ನಕಲಿ ನೋಟುಗಳೊಂದಿಗೆ ಸಿಕ್ಕಿಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.