ಮನೆ ರಾಜ್ಯ ಮುರುಘಾ ಶರಣರ ವಿರುದ್ಧದ ಪ್ರಕರಣ: ಸಂತ್ರಸ್ತ ಬಾಲಕಿಯರು ನ್ಯಾಯಾಲಯಕ್ಕೆ ಹಾಜರು

ಮುರುಘಾ ಶರಣರ ವಿರುದ್ಧದ ಪ್ರಕರಣ: ಸಂತ್ರಸ್ತ ಬಾಲಕಿಯರು ನ್ಯಾಯಾಲಯಕ್ಕೆ ಹಾಜರು

0

ಚಿತ್ರದುರ್ಗ (Chitradurga): ಪೋಕ್ಸೊ ಕಾಯ್ದೆಯಡಿ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಸಂತ್ರಸ್ತರಾಗಿರುವ ಬಾಲಕಿಯರನ್ನು ನಗರದ‌ ನ್ಯಾಯಾಲಯಕ್ಕೆ ಮಂಗಳವಾರ ಮಧ್ಯಾಹ್ನ ಹಾಜರುಪಡಿಸಲಾಗಿದೆ.

ಸಂತ್ರಸ್ತ ಬಾಲಕಿಯರು ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿದ್ದಾರೆ. ಬಾಲಕಿಯರ ಸರ್ಕಾರಿ ಬಾಲ ಮಂದಿರದಿಂದ ಪೊಲೀಸ್ ಭದ್ರತೆಯಲ್ಲಿ ಒಡನಾಡಿ ಸಿಬ್ಬಂದಿ ಹಾಗೂ ಬಾಲಭವನದ ಅಧಿಕಾರಿಗಳ ತಂಡ ಬಾಲಕಿಯರನ್ನು ನ್ಯಾಯಾಲಯಕ್ಕೆ ಕರೆ ತಂದಿತು. ಎರಡನೇ ಜೆಎಂಎಫ್ ಸಿ ನ್ಯಾಯಾಲಯದೊಳಗೆ ತೆರಳಿದ ಬಾಲಕಿಯರಿಂದ ಸಿಆರ್ ಪಿಸಿ 164 ಅಡಿ ಹೇಳಿಕೆ ದಾಖಲಿಸಿಕೊಳ್ಳಲಾಯಿತು.

ಬಾಲಕಿಯರನ್ನು ಕರೆ ತರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಕೋರ್ಟ್ ಹೊರ ಭಾಗದಲ್ಲಿ ಸಾರ್ವಜನಿಕರು ಜಮಾಯಿಸಿದರು. ಪೊಲೀಸರು ಗುಂಪನ್ನು ಚದುರಿಸಿದರು.

ಮತ್ತೊಂದೆಡೆ ಮುರುಘಾ ಮಠ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಮುರುಘಾ ಶರಣರು ಸೋಮವಾರ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಕಾರಣಕ್ಕೆ ಎಚ್ಚೆತ್ತ ಪೊಲೀಸರು ಮಠದ ಆವರಣದಲ್ಲಿ ಬೀಡುಬಿಟ್ಟಿದ್ದಾರೆ. ಮಠದ ಹೊರಗೆ ಹಾಗೂ ಒಳಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

‌ಮಠದ ಆವರಣ ಪ್ರವೇಶಿಸುವ ಪ್ರತಿ ವಾಹನ, ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ. ದೀಕ್ಷೆ ಪಡೆದ ಮಾಠಾಧೀಶರು ಹಾಗೂ ರಾಜಕೀಯ ಮುಖಂಡರು ಮುರುಘಾ ಮಠಕ್ಕೆ ಧಾವಿಸಿ ಶರಣರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಆನಂದಪ್ಪ ಮಠಕ್ಕೆ ಭೇಟಿ ನೀಡಿದ್ದರು.

ಹಿಂದಿನ ಲೇಖನಟೊಮೆಟೊದಿಂದ ಆರೋಗ್ಯ ಪ್ರಯೋಜನಗಳು
ಮುಂದಿನ ಲೇಖನನಾಳೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿರುವ ನಟಿ ರಮ್ಯಾ