ಮನೆ ರಾಜಕೀಯ ಕೇಂದ್ರ ಸರ್ಕಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ

0

ದಾವಣಗೆರೆ: ಸಾಮಾಜಿಕ ನ್ಯಾಯವನ್ನು ಸಮರ್ಥವಾಗಿ ಒದಗಿಸಲು ಜನರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಕುರಿತು ಸ್ಪಷ್ಟತೆ ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮರು ಸಮೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು. ಕೇಂದ್ರ ಸರ್ಕಾರ ಕರ್ನಾಟಕ ಮಾದರಿಯಂತೆ ಸಮಗ್ರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ ಕೈಗೊಳ್ಳುತ್ತಿಲ್ಲ ಎಂಬುದು ವಿಷಾದಕರ ಎಂದೂ ಸಿಎಂ ಹೇಳಿದರು.

ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಅವರು, “ಕೇಂದ್ರ ಸರ್ಕಾರವು ಜನಗಣತಿಯನ್ನು ಮಾತ್ರ ಕೈಗೊಳ್ಳುತ್ತಿದೆ. ಅದೂ 2027ನೇ ಸಾಲಿನಿಂದ. ಆದರೆ, ಆ ಜನಗಣತಿಯಲ್ಲಿ ಯಾವುದೇ ಶೈಕ್ಷಣಿಕ, ಆರ್ಥಿಕ ಅಥವಾ ಸಾಮಾಜಿಕ ವಿವರಗಳನ್ನು ಸಂಗ್ರಹಿಸುವ ಬಗ್ಗೆ ನಿರ್ಧಾರವೇ ಇಲ್ಲ” ಎಂದರು. “ನಾವು ರಾಜ್ಯ ಸರ್ಕಾರದ ಮಟ್ಟದಲ್ಲಿ ಕೈಗೊಂಡಿರುವ ಸಮೀಕ್ಷೆ ಸಂಪೂರ್ಣವಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಮಾಹಿತಿಯನ್ನು ಒಳಗೊಂಡಿದ್ದು, ಈ ಸಮೀಕ್ಷೆಯ ಭಾಗವಾಗಿ ಜಾತಿಗಣತಿಯೂ ಸಹ ಸೇರಿದೆ” ಎಂದು ಅವರು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರ ಅಭಿಪ್ರಾಯದ ಪ್ರಕಾರ, ಸಮಗ್ರ ಸಮೀಕ್ಷೆಯ ಮಾಹಿತಿ ಆಧಾರವಾಗಿ ಮಾತ್ರ ನಿಜವಾದ ಸಾಮಾಜಿಕ ನ್ಯಾಯಕ್ಕೆ ದಾರಿ ಸಿಗಲಿದೆ. “ಬಡವರು, ಬಡತನದ ರೇಖೆಗೆ ಕೆಳಗಿರುವವರು, ಸಮಾಜದ ದುರ್ಬಲ ವರ್ಗಗಳು – ಇವರ ಎಲ್ಲರನ್ನೂ ಗುರುತಿಸಿ ಯೋಜನೆ ರೂಪಿಸುವುದರಲ್ಲಿ ಈ ಸಮೀಕ್ಷೆ ಅತ್ಯಂತ ಅವಶ್ಯ” ಎಂದು ಅವರು ಹೇಳಿದರು.

ವರ್ಗಗಳ ಕಾಯ್ದೆಯ ಸೆಕ್ಷನ್ 11(1) ಪ್ರಕಾರ, ಕಳೆದ ವರದಿಗೆ ಹತ್ತು ವರ್ಷಗಳಾದ ಮೇಲೆ ಮರು ಸಮೀಕ್ಷೆ ಮಾಡುವುದು ಕಡ್ಡಾಯ. ಈ ಹಿನ್ನಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆ ಸರಿಯಾದದ್ದೆಂದು ಅವರು ಸ್ಪಷ್ಟನೆ ನೀಡಿದರು. “ಈ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ, ಆದರೆ ಸಮಾಜದ ಪ್ರಬಲರು ಮತ್ತು ದುರ್ಬಲರು ಎಲ್ಲರ ಅಭಿಪ್ರಾಯ ಕೂಡಲೇ ಪರಿಶೀಲನೆಗೆ ಒಳಪಡಬೇಕು. ನಾವು ಎಲ್ಲರ ಮಾತು ಕೇಳುತ್ತಿದ್ದೇವೆ” ಎಂದರು.