ಮೈಸೂರು/ಉಡುಪಿ : ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಸೇರಿದಂತೆ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿರೋದೀಗ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸಮವಸ್ತ್ರ ಸಮರಕ್ಕೆ ನಾಂದಿ ಹಾಡಿದೆ. ಒಂದು ಸಮುದಾಯದ ಮನವೊಲಿಕೆಗೆ ಇಳಿದಿರುವ ಕಾಂಗ್ರೆಸ್ ಸರ್ಕಾರ, ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು ಎಂದು ವಿಪಕ್ಷಗಳು ಮುಗಿಬಿದ್ದಿವೆ.
ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಹಿಜಾಬ್ಗೆ ಮಾತ್ರ ಅವಕಾಶ ಕೊಟ್ಟಿಲ್ಲ, ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟಕ್ಕೂ ಅವಕಾಶ ಕೊಟ್ಟಿದ್ದೇವೆ. ಆದರೆ ಶಾಲೆಗಳಿಗೆ ಕೇಸರಿ ಶಾಲು ಹಾಕಿಕೊಂಡು ಬರುವಂತಿಲ್ಲ, ಕೇಸರಿ ಪೇಟಕ್ಕೂ ಕೂಡ ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ. ಮೊದಲಿನಿಂದ ಯಾವ ಪೇಟಗಳಿತ್ತು, ಆ ಪೇಟಗಳಿಗಷ್ಟೇ ಅವಕಾಶ ಇರಲಿದೆ. ಈಗ ಪೇಟಕ್ಕೆ ಬಣ್ಣದ ಬದಲಾವಣೆ ಮಾಡಿಕೊಂಡರೆ ಅವಕಾಶ ಇಲ್ಲ ಎಂದಿದ್ದಾರೆ.
ಸರ್ಕಾರದ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ SDPI ಮುಖಂಡ ಮೊಹಮ್ಮದ್ ಅಶ್ರಫ್ , ಹಿಜಾಬ್ ವಿಚಾರದಲ್ಲಿ ಈ ಹಿಂದಿನ ಸರ್ಕಾರ ವಿದ್ಯಾರ್ಥಿನಿಯರ ಭವಿಷ್ಯದಲ್ಲಿ ಚೆಲ್ಲಾಟವಾಡಿತ್ತು. ಉಡುಪಿ ಜಿಲ್ಲೆಯಲ್ಲಿ ಇದನ್ನು ಆರಂಭ ಮಾಡಿದ್ದು ಇಲ್ಲಿಯ ಮಾಜಿ ಮತ್ತು ಹಾಲಿ ಶಾಸಕರು. ಅನಗತ್ಯ ಈ ವಿಚಾರ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಹಿಜಾಬ್ ಸಂಬಂಧ ಆದೇಶವನ್ನು ಸರ್ಕಾರ ಈ ಹಿಂದೆಯೇ ಹಿಂಪಡೆಯಬೇಕಿತ್ತು. ಹೀಗಿದ್ದರೂ ಸರ್ಕಾರದ ಆದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ಶಾಲಾ ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆಯವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಜೇನುಗೂಡಿಗೆ ಕೈ ಹಾಕಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿದ್ದು, ಮಮತಾ ಬ್ಯಾನರ್ಜಿ ಮಾದರಿ ಕರ್ನಾಟಕ ಮಾಡಲು ಹೊರಟಿದ್ದಾರೆ. ಮಮತಾ ಬ್ಯಾನರ್ಜಿಗೂ ಸಿಎಂ ಸಿದ್ದರಾಮಯ್ಯಗೂ ವ್ಯತ್ಯಾಸ ಇಲ್ಲ.
ಹಿಂದೆ ಹೋರಾಟ ಆದಾಗ ಆ ವಿದ್ಯಾರ್ಥಿಗಳ ಹಿಂದೆ ಇದ್ದಿದ್ದು PFI. ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಸರ್ಕಾರ ಮಾಡುತ್ತಿದೆ. ಸುಪ್ರೀಂಕೋರ್ಟ್ನಲ್ಲಿ ವಿಚಾರ ಬಾಕಿ ಇರುವಾಗ ನಿರ್ಧಾರ ಮಾಡಲು ಆಗಲ್ಲ. ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ನಾವು ಹೋರಾಟ ಮಾಡುತ್ತೇವೆ. ಮುಂದಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತೆ ಎಂದವರು ಎಚ್ಚರಿಸಿದ್ದಾರೆ.
















