ಚೆನ್ನೈ (ತಮಿಳುನಾಡು): ವಿಜಯ್ ಸಿಎಂ ಆಗಿ ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಹಲವು ಸಾರ್ವಜನಿಕ ಕಲ್ಯಾಣದ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದು, ಅದರಂತೆ ಇದೀಗ ರಾಜ್ಯದ ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗೆ ಇರುವ 717 ಸರ್ಕಾರಿ ಸ್ವಾಮ್ಯದ ಟಿಎಎಸ್ಎಂಎಸಿ ಮದ್ಯದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಎರಡೂ ವಾರದಲ್ಲಿ ಮುಚ್ಚಲು ಆದೇಶಿಸಿದ್ದು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ಎರಡು ವಾರಗಳಲ್ಲಿ ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯೊಳಗೆ ಇರುವ 717 ಚಿಲ್ಲರೆ ಮದ್ಯದ ಅಂಗಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಆದೇಶ ಹೊರಡಿಸಿದ್ದಾರೆ ಎಂದು ತೀಲಿದುಬಂದಿದೆ
ಈ ಕುರಿತು ಸದ್ಯ ರಾಜ್ಯದಲ್ಲಿ 4,765 ಚಿಲ್ಲರೆ ಮದ್ಯದ ಅಂಗಡಿಗಳನ್ನು ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ನಿರ್ವಹಿಸುತ್ತಿದೆ. ಇವುಗಳಲ್ಲಿ, ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಅಂಗಡಿಗಳನ್ನು ಗುರುತಿಸಲು ನೂತನ ಸಿಎಂ ನಿರ್ದೇಶನ ಮಾಡಿದ್ದರು. ಅದರಂತೆ 717 ಚಿಲ್ಲರೆ ಮದ್ಯದ ಅಂಗಡಿಗಳು ಗುರುತಿಸಲಾಗಿದೆ. ಗುರುತಿಸಲಾದ 717 ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ, ಪೂಜಾ ಸ್ಥಳಗಳ ಬಳಿ 276 ಅಂಗಡಿಗಳು, ಶಿಕ್ಷಣ ಸಂಸ್ಥೆಗಳ ಬಳಿ 186 ಅಂಗಡಿಗಳು ಮತ್ತು ಬಸ್ ನಿಲ್ದಾಣಗಳ ಬಳಿ 255 ಅಂಗಡಿಗಳನ್ನು ಗುರುತಿಸಲಾಗಿದೆ. ತಮಿಳುನಾಡು ಸರ್ಕಾರಕ್ಕೆ ಟಿಎಎಸ್ಎಂಎಸಿ ಮದ್ಯದಂಗಡಿಗಳು ಹೆಚ್ಚಿನ ಆದಾಯವನ್ನು ತರುತ್ತಿದ್ದು, ಈ ನಡುವೆ ಈ ಹಲವಾರು ಚಿಲ್ಲರೆ ಅಂಗಡಿಗಳನ್ನು ಮುಚ್ಚುವಂತೆ ಪಕ್ಷಾತೀತವಾಗಿ ಕರೆಗಳು ಬಂದಿವೆ. ರಾಜ್ಯದಲ್ಲಿನ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಟಿಎಎಸ್ಎಂಎಸಿ) ಕೂಡ ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿದೆ ಎನ್ನಲಾಗಿದೆ.
ಕಳೆದ ವರ್ಷ, ಟಿಎಎಸ್ಎಂಎಸಿ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಪರಾಧದಡಿ ತನಿಖಾ ಸಂಸ್ಥೆ ರಾಜ್ಯದಲ್ಲಿ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ತನ್ನ ಪ್ರಣಾಳಿಕೆಯಲ್ಲಿ ಮಾದಕ ದ್ರವ್ಯ ಮುಕ್ತ ತಮಿಳುನಾಡನ್ನು ನಿರ್ಮಿಸುವ ಭರವಸೆ ನೀಡಿದೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ವಿಜಯ್, ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಿದ್ದು, ಅವರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ‘ಸಿಂಗಪ್ಪೆನ್ ವಿಶೇಷ ಕಾರ್ಯಪಡೆ’ಯನ್ನು ರಚಿಸಿದ್ದಾರೆ ಎನ್ನಲಾಗುತ್ತಿದೆ.
















