ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ಹತ್ತಿರದ ಭದ್ರಾಪುರ ಗ್ರಾಮದಲ್ಲಿ ಸಂಭವಿಸಿದ ಅಪ್ರಾಪ್ತ ವಿಕಲಚೇತನ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸದ ಡಾ. ಸಿ.ಎನ್. ಮಂಜುನಾಥ್ ಇಂದು ಮೃತ ಬಾಲಕಿ ಮನೆಯವರಿಗೆ ಭೇಟಿಯಾಗಿ ಸಾಂತ್ವನ ನೀಡಿದ್ದಾರೆ. ಅವರು ಬಾಲಕಿ ತಾಯಿಯನ್ನು ಭೇಟಿಯಾಗಿ ಧೈರ್ಯ ತುಂಬಿದರು ಮತ್ತು ಈ ಅಮಾನವೀಯ ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, “14 ವರ್ಷದ ವಿಕಲಚೇತನ ಬಾಲಕಿಯನ್ನು ಹತ್ಯೆ ಮಾಡಿರುವುದು ವಿಕೃತಿ. ಇಂತಹ ಘಟನೆಗಳು ಸಮಾಜದ ಮಾನವೀಯತೆಯನ್ನೇ ಪ್ರಶ್ನೆಗೊಳಿಸುತ್ತವೆ. ಬಾಲಕಿ ಹತ್ಯೆಗೆ ನಿಖರ ಕಾರಣ ಏನೆಂಬುದು ಮರಣೋತ್ತರ ವರದಿ ಮತ್ತು ಎಫ್‌ಎಸ್‌ಎಲ್ (ಫಾರೆನ್ಸಿಕ್ ವಿಜ್ಞಾನ ಪ್ರಯೋಗಾಲಯ) ವರದಿಯಿಂದಲೇ ಸ್ಪಷ್ಟವಾಗಬೇಕು” ಎಂದು ಹೇಳಿದರು.
ಈ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದರು, ಈಗಾಗಲೇ ಎರಡು-ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿ, ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ ಎಂದು ತಿಳಿಸಿದರು. “ಈ ಪ್ರಕರಣದಲ್ಲಿ ಯಾವುದೇ ಎಡವಟ್ಟಿಲ್ಲದೆ ಪೂರ್ಣ ನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕು. ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು” ಎಂದು ಅವರು ಗಂಭೀರವಾಗಿ ಹೇಳಿದರು.
ಘಟನೆಯ ಸ್ಥಳಕ್ಕೆ ಭೇಟಿ ನೀಡಿದ ಸಂಸದರು, ಗ್ರಾಮದಲ್ಲಿ ವಸ್ತುತಃ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನೂ ಗಮನಿಸಿದರು. “ಗ್ರಾಮದಲ್ಲಿ ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕೊರತೆ ಇದೆ. ನಾನು ಅಧಿಕಾರಿಗಳಿಗೆ ಈ ಸಮಸ್ಯೆಗಳನ್ನು ಕೂಡ ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ” ಎಂದು ಅವರು ಹೇಳಿದರು.