ಚೆನ್ನೈ : ಟೀಕೆ ಬೆನ್ನಲ್ಲೇ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಆಗಿ ನೇಮಕ ಮಾಡಿಕೊಂಡ ಆದೇಶವನ್ನು ಸಿಎಂ ವಿಜಯ್ ಹಿಂಪಡೆದುಕೊಂಡಿದ್ದಾರೆ. ನಿನ್ನೆಯಷ್ಟೇ (ಮೇ 12) ವಿಜಯ್ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ನೇಮಕ ಮಾಡಿದ್ದರು. ಅದಾದ ಬಳಿಕ ಮಿತ್ರ ಪಕ್ಷಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಂದು ಆದೇಶವನ್ನು ರದ್ದುಗೊಳಿಸಿದ್ದಾರೆ.
ವಿಶ್ವಾಸ ಮತ ಯಾಚನೆ ನಂತರ ಈ ನೇಮಕಾತಿಯನ್ನು ಮರುಪರಿಶೀಲಿಸುವುದಾಗಿ ಸಿಎಂ ವಿಜಯ್ ತಿಳಿಸಿದ್ದರು. ರಾಜ್ಯ ರಾಜಕೀಯದಲ್ಲಿ ಅನಿಶ್ಚಿತತೆ ಉಂಟಾದ ಬಳಿಕ ಸರ್ಕಾರ ರಚಿಸಲು ತಮಿಳಗ ವೆಟ್ರಿ ಕಳಗಂ (ಟಿವಿಕೆಗೆ) ಹೊರಗಿನಿಂದ ಬೆಂಬಲ ನೀಡಿದ್ದ ಪಕ್ಷಗಳಲ್ಲೂ ಈ ನಿರ್ಧಾರ ಅಸಮಾಧಾನ ಮೂಡಿಸಿತ್ತು. ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದ ವಿಸಿಕೆ ಪಕ್ಷದ ಶಾಸಕ ವನ್ನಿ ಅರಸು ವಿಧಾನಸಭೆಯಲ್ಲಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದರು.
ನಮ್ಮ ಸರ್ಕಾರ ಜ್ಯೋತಿಷ್ಯಕ್ಕಿಂತ ವೈಜ್ಞಾನಿಕ ಚಿಂತನೆಗೆ ಆದ್ಯತೆ ನೀಡಬೇಕು ಎಂದು ಅವರು ವಿಶ್ವಾಸಮತ ಯಾಚನೆಗೂ ಮುನ್ನ ಹೇಳಿದ್ದರು. ಸರ್ಕಾರಿ ವ್ಯವಸ್ಥೆಯಲ್ಲಿ ಜ್ಯೋತಿಷಿಗೆ ಔಪಚಾರಿಕ ಸಲಹಾ ಹುದ್ದೆಯನ್ನ ಏಕೆ ನೀಡಲಾಗಿದೆ ಎಂದು ತಮಿಳಗ ವೆಟ್ರಿ ಕಳಗಂ ಬೆಂಬಲಿತ ಕೆಲ ಪಕ್ಷದ ನಾಯಕರು ಪ್ರಶ್ನೆ ಮಾಡಿದ್ದರು. ಅಲ್ಲದೇ ಈ ನೇಮಕಾತಿ ಸ್ವೀಕಾರಾರ್ಹವಲ್ಲ ಎಂದು ಬೇಸರ ಹೊರಹಾಕಿದ್ದವು.
ಜ್ಯೋತಿಷಿ ನೇಮಕ ವಿಚಾರದಲ್ಲಿ ಡಿಎಂಡಿಕೆ ಪಕ್ಷ ಕೂಡ ಟಿವಿಕೆ ವಿರುದ್ಧ ವಾಗ್ದಾಳಿ ನಡೆಸಿದೆ. ವೃದ್ಧಾಚಲಂ ಕ್ಷೇತ್ರದ ಶಾಸಕಿ ಪ್ರೇಮಲತಾ ವಿಜಯಕಾಂತ್ ಮಾತನಾಡಿ, ಜ್ಯೋತಿಷಿಯನ್ನು ಒಎಸ್ಡಿ ಆಗಿ ನೇಮಕ ಮಾಡಿರುವುದು ಯುವಕರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಆರೋಪಿಸಿದ್ದರು. ಅವರು ನಿಮ್ಮ ವೈಯಕ್ತಿಕ ಗುರುಗಳಾಗಿದ್ದರೆ ಖಾಸಗಿಯಾಗಿ ಇಟ್ಟುಕೊಳ್ಳಿ. ಆದರೆ ಸರ್ಕಾರದಲ್ಲಿ ಅಧಿಕೃತ ಸ್ಥಾನ ನೀಡುವುದು ಸರಿಯಲ್ಲ. ಯುವಕರು ನಿಮಗೆ ಮತ ನೀಡಿದ್ದಾರೆ. ಅವರಿಗೆ ಮಾದರಿಯಾಗುವಂತೆ ವರ್ತಿಸಿ ಎಂದರು. ಇದಕ್ಕೆ ಬೆಂಬಲವಾಗಿ ರಾಜ್ಯದ ಬಿಜೆಪಿ ಶಾಸಕ ಬೋಜರಾಜನ್.ಎಮ್ ಕೂಡ, ಜ್ಯೋತಿಷಿಯನ್ನು ಸರ್ಕಾರಿ ಅಧಿಕಾರಿಯಾಗಿ ನೇಮಿಸುವುದು ಜನರಿಗೆ ಕೆಟ್ಟ ಉದಾಹರಣೆ ಎಂದು ಟೀಕಿಸಿದರು.
ಈ ವಿವಾದದ ಕುರಿತು ಡಿಎಂಕೆ ಅತ್ಯಂತ ಕಟುವಾಗಿ ಪ್ರತಿಕ್ರಿಯಿಸಿದೆ. ಪಕ್ಷದ ವಕ್ತಾರ ಟಿಕೆಎಸ್ ಇಳಂಗೋವನ್ ವ್ಯಂಗ್ಯವಾಗಿ, ಇನ್ನು ಮುಂದೆ ಸಚಿವ ಸಂಪುಟ ಸಭೆಗಳಿಗೂ ಜ್ಯೋತಿಷಿಗಳೇ ಸಮಯ ನಿಗದಿಪಡಿಸುವಂತಾಗುತ್ತದೆ ಎಂದು ಹೇಳಿದರು. ಸರ್ಕಾರಕ್ಕೆ ನಿಯಮ ಮತ್ತು ಆಡಳಿತದ ಬಗ್ಗೆ ಸಲಹೆ ನೀಡುವ ಅಧಿಕಾರಿಗಳು ಬೇಕು. ಜ್ಯೋತಿಷಿಗಳು ಭವಿಷ್ಯ ಹೇಳಬಹುದು ಅಷ್ಟೇ, ವಿಜಯ್ ಅವರಿಗೆ ತಮ್ಮ ಪಕ್ಷದ ಕಾರ್ಯಕರ್ತರಿಗಿಂತ ಜ್ಯೋತಿಷಿಯ ಮೇಲೆಯೇ ಹೆಚ್ಚು ನಂಬಿಕೆ ಇರುವಂತೆ ಕಾಣುತ್ತಿದೆ ಎಂದೂ ಕಿಡಿಕಾರಿದರು.
ಜ್ಯೋತಿಷಿ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಟಿವಿಕೆ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ನುಡಿದಂತೆ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಗೆಲುವು ಸಾಧಿಸಿದೆ. ಪ್ರಾರಂಭದಿಂದಲೂ ಜ್ಯೋತಿಷಿಯವರು ವಿಜಯ್ಗೆ ಸಲಹೆಗಳನ್ನು ನೀಡುತ್ತಾ ಬಂದಿದ್ದರು. ಅಲ್ಲದೇ ಪ್ರಮಾಣವಚನ ದಿನವೂ ಕೂಡ ಮೊದಲು ಮಧ್ಯಾಹ್ನ 3:45ಕ್ಕೆ ಪ್ರಮಾಣವಚನ ಸ್ವೀಕರಿಸುವುದಾಗಿ ಸಮಯ ನಿಗದಿಪಡಿಸಲಾಗಿತ್ತು. ಆದರೆ ಜ್ಯೋತಿಷಿಯವರ ಸಲಹೆ ಮೇರೆಗೆ ಬಳಿಕ ಬೆಳಿಗ್ಗೆ 10 ಗಂಟೆಗೆ ಸಮಯ ಬದಲಾವಣೆ ಮಾಡಲಾಯಿತು.
ವಿಜಯ್ ಮಾತ್ರವಲ್ಲದೇ, ಜಯಲಲಿತಾ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ಇದೇ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರ ಬಳಿ ಭವಿಷ್ಯ ಕೇಳಿದ್ದರು ಎನ್ನಲಾಗಿದೆ. ಆ ಪೈಕಿ ವಿಜಯ್ ಗೆದ್ದಾಗ ವೆಟ್ರಿವೇಲ್ ಅವರು ಮನೆಗೆ ಹೋಗಿ ಅಭಿನಂದನೆ ಸಲ್ಲಿಸಿದ್ದರು. ನಾಲ್ಕು ದಶಕಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿರುವ ವೆಟ್ರಿವೇಲ್ ಅವರು ಹಲವಾರು ರಾಜಕೀಯ ದಿಗ್ಗಜರ ಭವಿಷ್ಯ ನುಡಿದಿದ್ದಾರೆ. ಆದರೆ ಸ್ವತಃ ತಾವು ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ರಾ ಎನ್ನುವ ಕುರಿತು ಅಧಿಕೃತವಾಗಿ ತಿಳಿದುಬಂದಿಲ್ಲ. ಅಲ್ಲದೇ ಮಾಜಿ ಸಿಎಂ ಜಯಲಲಿತಾ ಅವರು ಕೂಡ ವೆಟ್ರಿವೇಲ್ ಅವರನ್ನು ಸಂಪರ್ಕಿಸಿದ ನಂತರವೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

















