ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಭಕ್ತರಿಗೆ ಇದೀಗ ಹೆಚ್ಚುವರಿ ಒಂದು ಗಂಟೆಯ ದರ್ಶನ ಅವಕಾಶ ಲಭ್ಯವಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ನಿರ್ಣಯದ ಮೇರೆಗೆ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು ಈ ಮೊದಲು ಮಧ್ಯಾಹ್ನ 1.30ರಿಂದ 3.30ರ ವರೆಗೆ ದೇವರ ದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಭಕ್ತರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಇದೀಗ ಮಧ್ಯಾಹ್ನ 2ರಿಂದ 3ರ ವರೆಗೆ ಮಾತ್ರ ದರ್ಶನವನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ನಿರ್ಧರಿಸಲಾಗಿದೆ. ಇದರೊಂದಿಗೆ ಭಕ್ತರಿಗೆ ಮಧ್ಯಾಹ್ನ ಇನ್ನೊಂದು ಗಂಟೆ ಹೆಚ್ಚುವರಿ ದರ್ಶನದ ಅವಕಾಶ ದೊರಕಿದೆ ಎನ್ನಲಾಗಿದೆ.
ಆದರಿಂದ ಹೊಸ ವೇಳಾಪಟ್ಟಿಯ ಪ್ರಕಾರ ಬೆಳಗ್ಗೆ 6.30ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಅಪರಾಹ್ನ 3.00 ರಿಂದ ರಾತ್ರಿ 8.30ರವರೆಗೆ ದೇವರ ದರ್ಶನ ಲಭ್ಯವಿರಲಿದೆ. ಮಹಾಮಂಗಳಾರತಿ ನಡೆಯುವ ಸಮಯದಲ್ಲಿ ಮಾತ್ರ ಈ ಹಿಂದಿನಂತೆ ಕೆಲಕಾಲ ದರ್ಶನ ಸ್ಥಗಿತಗೊಳಿಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ತಿಳಿಸಿದೆ. ಈ ವ್ಯವಸ್ಥೆಯನ್ನು ಮೇ 10 ರಿಂದಲೇ ಜಾರಿಗೆ ತರಲಾಗಿದ್ದು, ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ಈ ಬದಲಾವಣೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾತನಾಡಿ, “ಭಕ್ತರ ಬೇಡಿಕೆ ಹಾಗೂ ಅನುಕೂಲತೆಯನ್ನು ಪರಿಗಣಿಸಿ ಆಡಳಿತ ಮಂಡಳಿ ಈ ತೀರ್ಮಾನ ಕೈಗೊಂಡಿದೆ” ಎಂದು ತಿಳಿಸಿದ್ದಾರೆ.
ಹಾಗೂ ಈ ಕುರಿತು 2025-26ನೇ ಆರ್ಥಿಕ ವರ್ಷದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ದಾಖಲೆಯ 167.89 ಕೋಟಿ ರೂ. ಆದಾಯ ಗಳಿಸಿ ರಾಜ್ಯದ ಮುಜರಾಯಿ ಇಲಾಖೆಯ ಅಧೀನದ ದೇವಸ್ಥಾನಗಳಲ್ಲಿ ಸತತ 15ನೇ ವರ್ಷವೂ ಮೊದಲ ಸ್ಥಾನ ಪಡೆದುಕೊಂಡಿದೆ. 2024-25ನೇ ಸಾಲಿನಲ್ಲಿ 155 ಕೋಟಿ ರೂ. ಆದಾಯ ಗಳಿಸಿತ್ತು. ಈ ವರ್ಷ 12 ಕೋಟಿ ರೂ. ಅಧಿಕ ಆದಾಯ ಗಳಿಸಿದೆ. ಈ ಮೂಲಕ ಸುಬ್ರಹ್ಮಣ್ಯ ದೇವಾಲಯ ಮತ್ತೊಮ್ಮೆ ತನ್ನ ಮಹಿಮೆಯನ್ನು ಸಾಬೀತುಪಡಿಸಿದೆ. ಹರಕೆ ಸೇವೆ, ಹುಂಡಿ ಕಾಣಿಕೆ, ಶಾಶ್ವತ ಸೇವಾ ನಿಧಿ, ಛತ್ರ ಹಾಗೂ ಕಟ್ಟಡ ಬಾಡಿಗೆ, ಅನ್ನಸಂತರ್ಪಣೆ ನಿಧಿ, ಹೂಡಿಕೆ ಬಡ್ಡಿ ಮತ್ತು ಕೃಷಿ ತೋಟದ ಆದಾಯದಿಂದ ಪ್ರಮುಖ ಪಾಲು ಬಂದಿದೆ ಎಂದು ತಿಳಿದು ಬಂದಿದೆ.

















