ಬೆಂಗಳೂರು : ರಾಜಧಾನಿ ಬೆಂಗಳೂರು ಸತತ ಮಳೆಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ ಮತ್ತು ಜಾಹೀರಾತುಗಳ ಮೇಲೇ ಗಮನಹರಿಸುತ್ತಿದೆ.
ಕಾಂಗ್ರೆಸ್ನ ಸಾಧನೆ ಬೆಂಗಳೂರಿನ ರಸ್ತೆ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಸತ್ತ ಸರ್ಕಾರಕ್ಕೆ ಸಾಧನೆ ಸಮಾವೇಶ ಬೇರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತಿನ ಡಬ್ಬಾ ಹೊಡೆಯುವುದು ಬಿಟ್ಟು, ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಪಕ್ಕಕ್ಕಿಟ್ಟು ಕೆಲಸ ಮಾಡಲಿ. ಎಂದು ಎಚ್.ಡಿ ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಒಂದು ವಾರದಿಂದ ಬಣ್ಣಬಣ್ಣದ ಸರಣಿ ಗ್ಯಾರಂಟಿ ಜಾಹೀರಾತುಗಳನ್ನು ಹಾಕುತ್ತಿದ್ದಾರೆ. ಬೆಂಗಳೂರು ಜನ ಬ್ರಾಂಡೆಡ್ ನರಕದಲ್ಲಿದ್ದಾರೆ. ನಗರದ ಜನ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು ಎಂದು ಕಿಡಿಕಾರಿದ್ದಾರೆ.
ಯಾವ ಪುರುಷಾರ್ಥಕ್ಕೆ ಗ್ರೇಟರ್ ಬೆಂಗಳೂರು? ಯಾರ ಉದ್ಧಾರಕ್ಕೆ ಬ್ರಾಂಡೆಡ್ ಬೆಂಗಳೂರು? ಲೂಟಿ ಹೊಡೆಯೋದಕ್ಕೆ ಹೊಸ ಹೊಸ ಹೆಸರೇ? ಎರಡು ವರ್ಷಗಳಿಂದ ಬ್ರಾಂಡೆಡ್, ಬ್ರಾಂಡೆಡ್ ಎಂದು ಭಜನೆ ಮಾಡುತ್ತಿದ್ದೀರಲ್ಲ. ಬ್ರಾಂಡೆಡ್ ಎಂದರೆ ಬೆಂಗಳೂರನ್ನು ಮುಳುಗಿಸುವುದಾ?
ಎರಡು ವರ್ಷಗಳಲ್ಲಿ ಎಷ್ಟೊಂದು ಬಾರಿ ಸಾಯಿ ಬಡವಾಣೆ ಮುಳುಗಿತು? ಅಲ್ಲಿಗೆ ಡಿಸಿಎಂ ಎಷ್ಟು ಸಲ ಹೋಗಿದ್ದರು? ಈ ಹಿಂದೆ ನಗರಾಭಿವೃದ್ಧಿ ಮಂತ್ರಿ ಆಗಿದ್ದಾಗ ನಗರಕ್ಕೇನು ಮಾಡಿದ್ದರು? ಸಚಿವಗಿರಿಯನ್ನು ಸ್ವ-ನಗದು ಅಭಿವೃದ್ಧಿಗೆ ಬಳಸಿಕೊಂಡರಷ್ಟೇ.
ಬೆಂಗಳೂರಿಗೆ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡಿದರೆಂದು ಕೇಳುತ್ತಾರೆ. 2006ರ 20 ತಿಂಗಳ ಅವಧಿಯಲ್ಲಿ 58 ರಸ್ತೆ ಅಗಲೀಕರಣ, ಮೆಟ್ರೋ ಮೊದಲ ಹಂತ ಕಾಮಗಾರಿಗೆ ಚಾಲನೆ, ಹೊಸ ಏರ್ಪೋರ್ಟ್ ರಸ್ತೆ, ನೆಲಮಂಗಲ ರಸ್ತೆ, ಎಲೆಕ್ಟ್ರಾನಿಕ್ ರಸ್ತೆ ಅಭಿವೃದ್ಧಿ ಸೇರಿ ಎಷ್ಟೋ ಕೆಲಸ ಮಾಡಿದ್ದೇನೆ. ಕೆರೆಯನ್ನೇ ನುಂಗಿ ಜೆಪಿ ನಗರ ಡಾಲರ್ಸ್ ಕಾಲೋನಿ ಮಾಡಿದ್ದರಲ್ಲ, ಆ ಮನೆಗಳಿಗೆ ಕೆರೆ ನೀರು ನುಗ್ಗುತ್ತಿದ್ದನ್ನು ತಪ್ಪಿಸಿದ್ದು ಯಾರು? ನನ್ನ ಆಡಳಿತದಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಆಗಿವೆ. ಹಿಂದೆ ಬಿಜೆಪಿ ಜೊತೆ 20 ತಿಂಗಳು, ಇನ್ನೊಮ್ಮೆ ನಿಮ್ಮ ಜೊತೆ 14 ತಿಂಗಳು. ನನ್ನ ಕೆಲಸಗಳಿಗೆ ದಾಖಲೆಗಳಿವೆ ನೋಡಿಕೊಳ್ಳಿ ಎಂದರು.